Job Description: ➤ ಇತ್ತೀಚಿನ ವರ್ಷಗಳಲ್ಲಿ ಭಾರತವು ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ. ಒಮ್ಮೆ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇಂದು ಜಾಗತಿಕ ಮಾರುಕಟ್ಟೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಮುಖ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ರಕ್ಷಣಾ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ, ಕಳೆದ ಆರ್ಥಿಕ ವರ್ಷದಲ್ಲಿ (2025-26) ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆಯಾದ ₹38,424 ಕೋಟಿಗೆ ತಲುಪಿದೆ. ➤ ಶೇ. 62.66 ರಷ್ಟು ಬೃಹತ್ ಬೆಳವಣಿಗೆ: ಕಳೆದ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ₹23,622 ಕೋಟಿಯಷ್ಟಿತ್ತು. ಆದರೆ ಈ ಬಾರಿ ಅದಕ್ಕಿಂತ ಬರೋಬ್ಬರಿ ₹14,802 ಕೋಟಿ ಹೆಚ್ಚು ಗಳಿಸುವ ಮೂಲಕ ಶೇ. 62.66 ರಷ್ಟು ದಾಖಲೆಯ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ಒಂದು ದಶಕದ ಇತಿಹಾಸವನ್ನು ಗಮನಿಸಿದರೆ, ಭಾರತದ ರಕ್ಷಣಾ ರಫ್ತು ಪ್ರಮಾಣವು ಸುಮಾರು 30 ಪಟ್ಟು ವೃದ್ಧಿಸಿರುವುದು ದೇಶದ ಆತ್ಮನಿರ್ಭರತೆಗೆ ಸಾಕ್ಷಿಯಾಗಿದೆ.➤ ಸಾರ್ವಜನಿಕ ಮತ್ತು ಖಾಸಗಿ ವಲಯದ ಜಂಟಿ ಯಶೋಗಾಥೆ: ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಈ ದೈತ್ಯ ಬೆಳವಣಿಗೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು (DPSUs) ಮತ್ತು ಖಾಸಗಿ ರಂಗ ಎರಡೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿವೆ:- ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು: ಶೇ. 54.84 (₹21,071 ಕೋಟಿ)- ಖಾಸಗಿ ವಲಯದ ಪಾಲು (ಟಾಟಾ, ಎಲ್ ಆ್ಯಂಡ್ ಟಿ, ಮಹೀಂದ್ರಾ ಇತ್ಯಾದಿ): ಶೇ. 45.16 (₹17,353 ಕೋಟಿ)➤ ಭಾರತದಲ್ಲಿ ನೋಂದಾಯಿತ ರಕ್ಷಣಾ ರಫ್ತುದಾರರ ಸಂಖ್ಯೆಯು ಕೇವಲ ಒಂದು ವರ್ಷದಲ್ಲಿ 128ರಿಂದ 145ಕ್ಕೆ ಏರಿಕೆಯಾಗಿದ್ದು, ಉದ್ಯಮ ರಂಗದಲ್ಲಿ ರಕ್ಷಣಾ ಉತ್ಪಾದನೆಗೆ ಇರುವ ಬೇಡಿಕೆಯನ್ನು ಇದು ಬಿಂಬಿಸುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜತೆಗೆ ಖಾಸಗಿ ರಕ್ಷಣಾ ಕಂಪನಿಗಳೂ ಈ ಪ್ರಗತಿಗೆ ಮಹತ್ವದ ಕೊಡುಗೆ ನೀಡಿವೆ.➤ ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಸಣ್ಣ ಬಿಡಿಭಾಗಗಳನ್ನು ಮಾತ್ರವಲ್ಲದೆ, ಭಾರತ ನಿರ್ಮಿತ ಬುಲೆಟ್ ಪ್ರೂಫ್ ಜಾಕೆಟ್‌ಗಳು, ರೇಡಾರ್‌ಗಳು, ಕರಾವಳಿ ಕಾವಲು ನೌಕೆಗಳು, ಸೇನಾ ವಾಹನಗಳು ಹಾಗೂ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ಮತ್ತು ಆಕಾಶ್ ವಾಯು ರಕ್ಷಣಾ ವ್ಯವಸ್ಥೆಗಳಂತಹ ಸಂಪೂರ್ಣ ಯುದ್ಧ ಸಾಮಗ್ರಿಗಳಿಗೆ ಭಾರಿ ಬೇಡಿಕೆಯಿದೆ.➤ ರಕ್ಷಣಾ ವಲಯದಲ್ಲಿ ಆಮದು ಕಡಿತಗೊಳಿಸಿ ದೇಶೀಯ ಉದ್ಯಮಗಳಿಗೆ ಶೇ. 75 ಕ್ಕೂ ಹೆಚ್ಚು ಬಜೆಟ್ ಮೀಸಲಿಟ್ಟಿರುವುದು, ಸರಳೀಕೃತ ರಫ್ತು ಪ್ರಕ್ರಿಯೆಗಳು, ಸಂಶೋಧನೆಗೆ (R&D) ನೀಡಿದ ಉತ್ತೇಜನ ಹಾಗೂ ಕರಡು ರಕ್ಷಣಾ ಸ್ವಾಧೀನ ಪ್ರಕ್ರಿಯೆ (DAP) 2026ರ ಅಡಿಯಲ್ಲಿ ಕಡ್ಡಾಯ ದೇಶೀಯ ಪಾಲುದಾರಿಕೆಯನ್ನು ಶೇ. 60 ಕ್ಕೆ ಹೆಚ್ಚಿಸಿರುವುದು ಭಾರತದ ರಕ್ಷಣಾ ರಫ್ತಿನ ಅಭೂತಪೂರ್ವ ಪ್ರಗತಿಗೆ ಪ್ರಮುಖ ಕಾರಣಗಳಾಗಿವೆ.➤ ದೇಶದ ಹೆಮ್ಮೆಯ ಪ್ರಮುಖ ಸಾಧನೆಗಳು: ಐಎನ್‌ಎಸ್ ವಿಕ್ರಾಂತ್ (INS Vikrant): ಭಾರತ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಿದ ಮೊದಲ ವಿಮಾನ ವಾಹಕ ನೌಕೆ. ಇದು ಭಾರತದ ನೌಕಾ ಶಕ್ತಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದೆ. ನ್ಯೂಕ್ಲಿಯರ್ ಟ್ರಿಯಾಡ್ ಸಾಧನೆ: ಐಎನ್‌ಎಸ್ ಅರಿಹಂತ್ ಸರಣಿಯ ಅಣುಶಕ್ತಿಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಮೂಲಕ ಭಾರತವು ನೆಲ, ಜಲ, ಆಕಾಶ ಮೂರರಿಂದಲೂ ಅಣುಬಾಂಬ್ ದಾಳಿ ಮಾಡುವ ಸಾಮರ್ಥ್ಯ (Nuclear Triad) ಹೊಂದಿದ ವಿಶ್ವದ ಕೆಲವೇ ಆಯ್ದ ದೇಶಗಳ ಪಟ್ಟಿಗೆ ಸೇರಿದೆ. ಎಲ್‌ಸಿಎಚ್ ಪ್ರಚಂಡ್ (LCH Prachand): ಕಾರ್ಗಿಲ್, ಸಿಯಾಚಿನ್‌ನಂತಹ ಅತಿ ಎತ್ತರದ ಪರ್ವತ ಪ್ರದೇಶಗಳಲ್ಲೂ ಸುಲಭವಾಗಿ ಕಾರ್ಯಾಚರಣೆ ನಡೆಸಬಲ್ಲ ಹಗುರವಾದ ಯುದ್ಧ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ