* ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸತತ ಆರನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ.* ರೆಪೋ ದರವನ್ನು ಮೊದಲಿದ್ದ ಶೇಕಡಾ 6.5 ರಲ್ಲಿಯೇ ಉಳಿಸಿಕೊಳ್ಳಲು ಸಮಿತಿ ಒಪ್ಪಿಗೆ ನೀಡಿದೆ. * ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣದುಬ್ಬರ ಗಣನೀಯವಾಗಿ ಇಳಿಕೆ ಕಾಣುತ್ತಿದೆ. 2024 ರ ವರ್ಷವೂ ಮತ್ತಷ್ಟು ಇಳಿಮುಖವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.* ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಎದುರಾಗಿರುವ ಅನಿಶ್ಚಿತ ಪರಿಸ್ಥಿತಿ ಹಾಗೂ ಚಿಲ್ಲರೆ ಹಣದುಬ್ಬರ ವನ್ನು ಶೇ 4ರ ಮಿತಿಯಲ್ಲಿಯೇ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯ ಸಮಿತಿಯು ಈ ನಿರ್ಧಾರ ಕೈಗೊಂಡಿದೆ* ಭಾರತದಲ್ಲಿನ ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಅಂದಾಜಿನಂತೆ ಶೇ 2-6ರ ಪ್ರತಿಶತದಲ್ಲೇ ಇದೆ. ಆದರೆ, ವಾಸ್ತವದಲ್ಲಿ 4 ಶೇಕಡಾ ಸನ್ನಿವೇಶಕ್ಕಿಂತ ಮೇಲಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ನಲ್ಲಿ ಈ ಪ್ರಮಾಣ ಶೇ.5.69ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ 2023-24 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 7.6 ರಷ್ಟು ಬೆಳವಣಿಗೆ ಹೊಂದಿದೆ. ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ಹೊರ ಹೊಮ್ಮಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.8 ರಷ್ಟು ಬೆಳವಣಿಗೆಯಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.