* ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯಚೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ.* ಕೇಂದ್ರ ಸರಕಾರದ ವಿಮಾನಯಾನ ಸಚಿವರೊಂದಿಗೆ ಹಲವಾರು ಬಾರಿ ನಡೆಸಿದ ಚರ್ಚೆಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.* ರಾಯಚೂರು ಸಂಸದ ಜಿ.ಕುಮಾರ ನಾಯ್ಕ್ ನೇತೃತ್ವದ ತಂಡ ಇತ್ತೀಚಿಗೆ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ವಿಮಾನಯಾನ ಸಚಿವರು ಅಗತ್ಯ ಅನುಮತಿಯನ್ನು ನೀಡಿ ರಾಜ್ಯ ಸರಕಾರಕ್ಕೆ ಪತ್ರ ಬರಬರೆದಿದ್ದಾರೆ ಎಂದು ಭೋಸರಾಜು ಹರ್ಷ ವ್ಯಕ್ತಪಡಿಸಿದ್ದಾರೆ.* ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರಕಾರದೊಂದಿಗೆ ಸಮನ್ವಯ ಮಾಡಿದ್ದರು. ರಾಯಚೂರು ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರಕಾರ ನೀಡುವುದಾಗಿಯೂ ಭರವಸೆ ನೀಡಿದ್ದರು.* ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮತ್ತು ಬಜೆಟ್ ನಲ್ಲಿ ಸಹ ಈ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂದು ಭೋಸರಾಜು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.