* ಸ್ಕಾಟ್ಲೆಂಡ್ ನ ಗ್ಲಾಸ್‌ಗೊನಲ್ಲಿ 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹಾಕಿ, ಬ್ಯಾಡ್ಮಿಂಟನ್‌, ಕುಸ್ತಿ, ಶೂಟಿಂಗ್, ಟೇಬಲ್ ಟೆನ್ನಿಸ್, ಸ್ಕ್ವಾಷ್‌, ಟ್ರಥ್ಲಾನ್‌ ಹಾಗೂ ಕ್ರಿಕೆಟ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.* ಕ್ರೀಡಾಕೂಟವನ್ನು ಬಜೆಟ್ ಸ್ನೇಹಿಯಾಗಿಸುವ ಉದ್ದೇಶದಿಂದ ಈ ಆಟಗಳನ್ನು ಕೈಬಿಡಲಾಗಿದೆ. 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಕ್ರೀಡಾ ನಗರಿಯ ಅಭಿವೃದ್ಧಿಗಾಗಿ 100 ದಶಲಕ್ಷ ಪೌಂಡ್‌ಗಳನ್ನು ಖರ್ಚು ಮಾಡುವುದಾಗಿ ಸ್ಕಾಟ್‌ಲೆಂಡ್ ಹೇಳಿದೆ.* ಇಡೀ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ಕೇಂದ್ರಗಳನ್ನಷ್ಟೇ ಬಳಸಲಾಗುತ್ತಿದ್ದು, 2022ರ ಬರ್ಮಿಂಗ್‌ಹ್ಯಾಮ್‌ ಆವೃತ್ತಿಗೆ ಹೋಲಿಸಿದಲ್ಲಿ 2026ರಲ್ಲಿ ಕ್ರೀಡೆಗಳ ಸಂಖ್ಯೆಗಳು ಗಣನೀಯವಾಗಿ ಕುಸಿಯಲಿವೆ ಎಂದು ಹೇಳಲಾಗಿದೆ.* ಹಾಲಿ ಕ್ರೀಡಾಕೂಟದಲ್ಲಿ ಕೇವಲ10 ಕ್ರೀಡೆಗಳಷ್ಟೇ ಇರಲಿದೆ. ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಹಲವು ಆಟಗಳು ಇರಬೇಕು. ಜತೆಗೆ ನಿರ್ವಹಣೆ ಮತ್ತು ಹಣಕಾಸು ವೆಚ್ಚವನ್ನೂ ತಗ್ಗಿಸಬೇಕಾಗಿದೆ. ಹೀಗಾಗಿ ಅಥ್ಲೆಟಿಕ್ಸ್‌ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ (ಟ್ರ್ಯಾಕ್‌ ಮತ್ತು ಫೀಲ್ಡ್‌), ಈಜು, ಪ್ಯಾರಾ ಈಜು, ಆರ್ಟಿಸ್ಟಿಕ್ ಜಿನ್ಮಾಸ್ಟಿಕ್‌, ಟ್ರ್ಯಾಕ್‌ ಸೈಕ್ಲಿಂಗ್‌ ಹಾಗೂ ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್‌, ನೆಟ್‌ಬಾಲ್‌, ವ್ಹೈಟ್‌ ಲಿಫ್ಟಿಂಗ್‌ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್‌, ಬಾಕ್ಸಿಂಗ್, ಜುಡೊ, ಬೌಲ್ಸ್‌ ಹಾಗೂ ಪ್ಯಾರಾ ಬೌಲ್ಸ್‌, 3X3 ಬಾಸ್ಕೆಟ್‌ಬಾಲ್‌, 3X3 ಗಾಲಿಕುರ್ಚಿ ಬಾಸ್ಕೆಟ್‌ಬಾಲ್‌’ ಇರಲಿದೆ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಹೇಳಿದೆ.* ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ಶೂಟಿಂಗ್ ಅನ್ನು ಕೈಬಿಡಲಾಗಿತ್ತು. ಅದು ಈ ಬಾರಿಯೂ ಮುಂದುವರಿದಿದೆ. ಇದರೊಂದಿಗೆ ಭಾರತಕ್ಕೆ ಹೆಚ್ಚಿನ ಪದಕ ತಂದು ಕೊಡುವಂತಹ ಪ್ರಮುಖ ಕ್ರೀಡೆಗಳನ್ನು ಕೈಬಿಟ್ಟಿರುವುದು ಭಾರತದ ಪದಕ ಬೇಟೆಗೆ ತೊಡಕಾಗ‌ಲಿದೆ.* 2026 ಜುಲೈ 23ರಿಂದ ಆಗಸ್ಟ್‌ 2ರವರೆಗೆ ಕಾಮನ್‌ವೆಲ್ತ್‌ ಗೇಮ್ಸ್‌ ನಡೆಯಲಿದೆ. ಗ್ಲಾಸ್‌ಗೋಗೆ 12ನೇ ವರ್ಷದ ನಂತರ ಆತಿಥ್ಯ ವಹಿಸುವ ಅವಕಾಶ ಲಭಿಸಿದ್ದು, ಪ್ಯಾರಾ ಅಥ್ಲೀಟ್‌ 2002ರ ಮ್ಯಾಂಚೆಸ್ಟರ್‌ ಆವೃತ್ತಿಯಿಂದ ಆರಂಭಗೊಂಡಿದೆ.* 2014ರಲ್ಲಿ ಹಾಕಿಯನ್ನು ಕೈಬಿಡಲಾಗಿತ್ತು. ಆದರೆ ಈವರೆಗಿನ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಮೂರು ಬೆಳ್ಳಿ ಹಾಗೂ 2 ಕಂಚಿನ ಪದ ಗೆದ್ದಿತ್ತು. ಬ್ಯಾಡ್ಮಿಂಟನ್‌ ಈವರೆಗೂ 10 ಚಿನ್ನ ಸೇರಿದಂತೆ 31 ಪದಕಗಳನ್ನು ಪಡೆದಿದೆ. ಇನ್ನು ಶೂಟಿಂಗ್‌ನಲ್ಲಿ ಈವರೆಗೂ 135 ಪದಕಗಳನ್ನು ಪಡೆದಿದೆ. ಇದರಲ್ಲಿ 63 ಚಿನ್ನದ ಪದಕ ಒಳಗೊಂಡಿದೆ. ಭಾರತಕ್ಕೆ ಕುಸ್ತಿಯಲ್ಲಿ 114 ಪದಕ ಭಾರತಕ್ಕೆ ಲಭಿಸಿದೆ. ಕ್ರಿಕೆಟ್‌ನಲ್ಲಿ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸಿದೆ.