* ಕೇಂದ್ರ ಶಿಕ್ಷಣ ಸಚಿವಾಲಯದ 'ರಾಷ್ಟ್ರ- ಮಟ್ಟದ ಉತ್ತಮ ಶಿಕ್ಷಕ' ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್ ಹಾಗೂ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ನಾರಾಯಣ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಪ್ನಾ ಶ್ರೀಶೈಲ ಅನಿಗೋಳ ಅವರು ಭಾಜನರಾಗಿದ್ದಾರೆ.* ಈ ಪ್ರಶಸ್ತಿಯನ್ನು ಸೆ. 5ರಂದು ದೆಹಲಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಕ್ಷಕರಿಗೆ 50 ಸಾವಿರ ರೂ ನಗದು ಹಾಗೂ ಬೆಳ್ಳಿ ಫಲಕದೊಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.* ಪ್ರಶಸ್ತಿಗೆ ಆಯ್ಕೆಯಾಗಿರುವ ನಾರಾಯಣ ಭಾಗ್ವತ್ ಅವರು, ಉತ್ತರ ಕನ್ನಡ ಜಿಲ್ಲೆ ಕುಮಟಾ ಹಂದಿಗೋಣದವರು. ಕನ್ನಡ ಎಂಎ.,ಎಂ.ಇಡಿ. ಪದವಿ ಪಡೆದುಕೊಂಡಿದ್ದಾರೆ. ಹಾಗೂ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕಥೆ, ಕವನ, ನಾಟಕ ರಚನೆ, ಚಿತ್ರಕಲೆ, ಸಂಗೀತ, ನಾಟಕ ನಿರ್ದೇಶನ ಮತ್ತು ಅಭಿನಯ, ಉಪನ್ಯಾಸ, ರಜಾ ಶಿಬಿರಗಳ ಸಂಘಟನೆ, ಯಕ್ಷಗಾನ, ಕರಕುಶಲ ಕಲೆಯ ಜ್ಞಾನ ಹೊಂದಿದ್ದಾರೆ.* ಪ್ರಶಸ್ತಿಗೆ ಆಯ್ಕೆಯಾಗಿರುವ ಮತ್ತೊಬ್ಬ ಶಿಕ್ಷಕರು ಸಪ್ನಾ ಶ್ರೀಶೈಲ ಅನಿಗೋಳ ಅವರು, ಎಂಎಸ್ಸಿ. ಬಿ.ಇಡಿ ಪದವೀಧರರಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡಿ ಶಾಲೆಗೆ ಕರೆತಂದು ಅವರಿಗೆ ಶಿಕ್ಷಣ ಕೊಡುತ್ತಿದ್ದಾರೆ. * ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಪ್ರೌಢಶಾಲೆಗೆ ಅವಕಾಶ ವಂಚಿತ ಹೆಣ್ಣುಮಕ್ಕಳ ಪಾಲಕರ ಮನೆಗೂ ಭೇಟಿ ನೀಡಿ ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ಸೌಲಭ್ಯಗಳನ್ನು ತಿಳಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.