* ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಜುಲೈ 26 ರಂದು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.* ರಾಮನಗರ ಜಿಲ್ಲೆಯೂ ಬ್ರಾಂಡ್ ಬೆಂಗಳೂರಿನ ಭಾಗವಾಗಬೇಕು ಮತ್ತು ಅಲ್ಲಿ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಹೊಸ ನಾಮಕರಣ ಮಾಡಲಾಗುತ್ತಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ವಿವರಿಸಿದರು.* ಹೆಸರು ಬದಲಿಸಲು ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪ್ರಮುಖ ವ್ಯಕ್ತಿಗಳಿಂದ ಒತ್ತಾಯವಿತ್ತು. ಇದರಲ್ಲಿ ಹಿತಾಸಕ್ತಿ ಇಲ್ಲ. ಚುನಾವಣೆ ದೃಷ್ಟಿಯಿಂದಲೂ ಮಾಡಿದ್ದಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್‌ನಾಮಕರಣ ಮಾಡುವುದರಿಂದ ಸ್ಥಳೀಯರಿಗೆ ಬೆಂಗಳೂರು ಬ್ರಾಂಡ್‌ನ ಎಲ್ಲ ಪ್ರಯೋಜನಗಳು ಸಿಗಲಿವೆ. ಅಲ್ಲಿನ ಆಸ್ತಿ ಮೌಲ್ಯವೂ ಹೆಚ್ಚಾಗಲಿದೆ ಎಂದು ಪಾಟೀಲರು ತಿಳಿಸಿದರು.* ಕೇಂದ್ರ ಭಾರಿ ಕೈಗಾರಿಕೆ ಸಚಿರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರವನ್ನು ಕೇಂದ್ರ ಸ್ಥಾನವಾಗಿಟ್ಟು ಪ್ರತ್ಯೇಕ ಜಿಲ್ಲೆಯನ್ನು ಘೋಷಿಸಿದ್ದರು.* ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ನಾಮಕರಣದಿಂದ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಸುತ್ತಮುತ್ತಲ ಪ್ರದೇಶಗಳು ಅಭಿವೃದ್ಧಿಯಾಗಲಿವೆ. ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆದಾರು ಆಕರ್ಷಿತರಾಗಲಿದೆ. ಮುಖ್ಯವಾಗಿ ಆಸ್ತಿ ಮೌಲ್ಯ ಹೆಚ್ಚಳವಾಗಲಿದೆ.