* ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೂತನ ಅಧ್ಯಕ್ಷರನ್ನಾಗಿ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಇದೀಗ ಸಂಗ್ರೇಶಿ ಅವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ಜೂನ್ 28 ರಂದು (ಶುಕ್ರವಾರ) ಆದೇಶ ಹೊರಡಿಸಿದೆ.* ರಾಜ್ಯ ಸರ್ಕಾರದ ಶಿಫಾರಸಿನಂತೆ ಸಂಗ್ರೇಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರು ಜೂನ್ 28 ರಂದು ಆದೇಶ ಹೊರಡಿಸಿದ್ದಾರೆ. ಇವರ ಅಧಿಕಾರ ಅವಧಿಯು ಮುಂದಿನ ಐದು ವರ್ಷಗಳವರೆಗೆ ಇರುತ್ತದೆ.* ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಡಾ. ಬಿ.ಬಸವರಾಜು ಅವರ ಅವಧಿ ಜೂನ್‌ 23ಕ್ಕೆ ಕೊನೆಗೊಂಡಿತ್ತು. ಆ ಸ್ಥಾನಕ್ಕೆ ಸಂಗ್ರೇಶಿ ಅವರನ್ನು ನೇಮಕ ಮಾಡಲಾಗುತ್ತಿದೆ.* ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಂಗ್ರೇಶಿ ಅವರ ಸೇವಾ ನಿವೃತ್ತಿ ಇನ್ನೊಂದು ತಿಂಗಳು ಬಾಕಿ ಇದ್ದು, ಉಳಿದ ಅವಧಿಗೆ ಸ್ವಯಂ ನಿವೃತ್ತಿ ಪಡೆದುಕೊಂಡು ಅವರು ರಾಜ್ಯ ಚುನಾವಣಾ ಆಯುಕ್ತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. * 2008ರಲ್ಲಿ ಜಿ ಎಸ್ ಸಂಗ್ರೇಶಿಯವರು ಮೈಸೂರು ಜಿಲ್ಲೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು.