* ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯ ಭಾರತ ಮಂಟಪದಲ್ಲಿ ಆಗಸ್ಟ್ 23 2024 ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.* 2023ರ ಆಗಸ್ಟ್ 23 ರಂದು ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ದಿನದ ಸ್ಮರಣಾರ್ಥವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಇದೇ ವೇಳೆ “ರೋಬೋಟಿಕ್ಸ್ ಚಾಲೆಂಜ್” ಮತ್ತು “ಭಾರತೀಯ ಅಂತರಿಕ್ಷ ಹ್ಯಾಕಥಾನ್” ಸ್ಪರ್ಧೆಯ ವಿಜೇತರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು.* ಬಾಹ್ಯಾಕಾಶ ವಲಯದಲ್ಲಿ ಇಸ್ರೋ ಗಮನಾರ್ಹ ಸಾಧನೆ ಮಾಡಿದೆ. ಇದರ ಜೊತೆಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೂ ಇಸ್ರೋ ಅಮೂಲ್ಯ ಕೊಡುಗೆ ನೀಡಿದೆ.  ಬಾಹ್ಯಾಕಾಶ ವಲಯದಲ್ಲಿ ನಮ್ಮ ದೇಶವು ನಿರಂತರ ಪ್ರಗತಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾವು ಶ್ರೇಷ್ಠತೆಯ ಮಾನದಂಡಗಳನ್ನು ನಿಗದಿಪಡಿಸುವುದನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.* ಕನಿಷ್ಠ ಸಂಪನ್ಮೂಲಗಳನ್ನು ಬಳಸಿ ವಿಶ್ವದ ಅತ್ಯುತ್ತಮ ಬಾಹ್ಯಾಕಾಶ ಯೋಜನೆಗಳನ್ನು ಸಾಕಾರಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ರಾಷ್ಟ್ರಪತಿ ಅಭಿನಂದಿಸಿದರು.* ಯಶಸ್ವಿಯಾದ ಮಂಗಳಯಾನವಾಗಿರಬಹುದು ಅಥವಾ ಒಮ್ಮೆಗೇ ನೂರಕ್ಕೂ ಹೆಚ್ಚು ಉಪಗ್ರಹಗಳ ಯಶಸ್ವಿ ಉಡಾವಣೆಯಾಗಿರಬಹುದು, ನಾವು ಅನೇಕ ಮಹತ್ವದ ಸಾಧನೆಗಳನ್ನು ಮಾಡಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. * ಭೂಕಕ್ಷೆಯಲ್ಲಿ ನಿಷ್ಕ್ರಿಯಗೊಂಡ ಉಪಗ್ರಹಗಳ ಅವಶೇಷಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿ ಬ್ರೌಪದಿ ಮುರ್ಮು, 2030 ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಬಾಹ್ಯಾಕಾಶ ಯೋಜನೆಗಳನ್ನು 'ಅವಶೇಷಮುಕ್ತ' ಆಗಿಸುವ ಗುರಿ ಹೊಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.