* ರಾಜ್ಯಸರ್ಕಾರದ ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ 10 ಕೋಟಿ ರೂ.ವರೆಗೆ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ 'ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ-2023'ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರು ಒಪ್ಪಿಗೆ ನೀಡಿದ್ದಾರೆ.* ಈ ಹಿಂದೆ 545 ಪಿಎಸ್‌ಐ ಹುದ್ದೆ ನೇಮಕ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳು ಸದ್ದು ಮಾಡಿತ್ತು. ಆ ಹಿನ್ನೆಲೆಯಲ್ಲಿ ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ವಿಧಾನಮಂಡಲದಲ್ಲಿ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು.* ನಕಲು ಅಥವಾ ಹೊರಗಿನಿಂದ ನೆರವು ಪಡೆದು ಪರೀಕ್ಷಾ ಅಕ್ರಮ ನಡೆಸುವ ಅಭ್ಯರ್ಥಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 10 ಲಕ್ಷ ರೂ.ದಂಡ ವಿಧಿಸುವುದು.* ಅಭ್ಯರ್ಥಿ ಸೇರಿದಂತೆ ಯಾವುದೇ ವ್ಯಕ್ತಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರಯತ್ನಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಅಕ್ರಮವಾಗಿ ಉತ್ತರ ಬರೆಯುವುದು ಅಥವಾ ಬರೆಯಲು ನೆರವಾಗುವುದು ಸೇರಿದಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರೀಕ್ಷಾ ಅಕ್ರಮಕ್ಕೆ ನೆರವು ನೀಡುವವರಿಗೆ 8ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ 15 ಲಕ್ಷ ರೂ.ನಿಂದ 10 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.* ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಂದಿನ ಎರಡು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಗೆ ಅನರ್ಹಗೊಳಿಸುವ ಪ್ರಸ್ತಾವವು ಸೆಕ್ಷನ್ 11 (2)ರಲ್ಲಿದೆ.* ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಆ ಸಂಸ್ಥೆ ಅಥವಾ ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಸೆಕ್ಷನ್ 13ರಲ್ಲಿ ಅವಕಾಶ ಕಲ್ಪಿಸಲಿದೆ.