* ಭಾರತ ದೇಶದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಅವರು ಜ.25 ರಂದು ಭಾರತಕ್ಕೆ ಆಗಮಿಸಲಿದ್ದಾರೆ. * ಪ್ರಧಾನಿ ಮೋದಿ ಅವರು 2023ರಲ್ಲಿ ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ನೇಹದ ಸಂಕೇತವಾಗಿ, ಪರಸ್ಪರ ಸಹಕಾರ ತತ್ವದಡಿ ಮ್ಯಾಕ್ರನ್ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. * ಕಳೆದೊಂದು ವರ್ಷದ ಅವಧಿ ಯಲ್ಲಿ ಮೋದಿ ಹಾಗೂ ಮ್ಯಾಕ್ರನ್ ವಿಶ್ವದ ನಾನಾ ವೇದಿಕೆಗಳಲ್ಲಿ ಪರಸ್ಪರ ಆರು ಬಾರಿ ಭೇಟಿಯಾಗಿದ್ದಾರೆ. ಇದೀಗ ಉಭಯ ನಾಯಕರು ಏಳನೇ ಬಾರಿ ಮುಖಾಮುಖಿಯಾಗಲಿದ್ದಾರೆ.*  ಫ್ರಾನ್ಸ್ ಅಧ್ಯಕ್ಷರಾಗಿ ಭಾರತಕ್ಕೆ ಆಗಮಿಸುತ್ತಿರುವ ಮ್ಯಾಕ್ರನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತುಕತೆ ನಡೆಸಲಿದ್ದಾರೆ. ರಕ್ಷಣೆ, ಆರ್ಥಿಕತೆ, ವ್ಯಾಪಾರ, ವಾಣಿಜ್ಯ, ಡಿಜಿಟಲ್ ತಂತ್ರಜ್ಞಾನ. ಶಿಕ್ಷಣ, ಪ್ರವಾಸೋದ್ಯಮ ಕುರಿತು ಸಮಾಲೋಚನೆ ನಡೆಸಲಿದ್ದಾರೆ. * 1950ರಿಂದಲೂ ಭಾರತ ಇತರ ರಾಷ್ಟ್ರಗಳ ಗಣ್ಯರನ್ನು ಗಣರಾಜ್ಯೋತ್ಸವ ಆಚರಣೆಗೆ ಗೌರವಾನ್ವಿತ ಅತಿಥಿಯಾಗಿ ಆಹ್ವಾನಿಸುತ್ತಿದೆ. ಈ ರೀತಿ ಅತಿಥಿಗಳನ್ನು ಆಹ್ವಾನಿಸುವಾಗ ದೇಶದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.