* ಪಾಕಿಸ್ತಾನ್ ಮುಸ್ಲೀಂ ಲೀಗ್ ನವಾಜ್ ಪಕ್ಷದ ಅಧ್ಯಕ್ಷ ಶೆಹಜಾಬ್ ಷರೀಫ್ ಅವರು ಎರಡನೇ ಬಾರಿಗೆ ನೆರೆ ರಾಷ್ಟ್ರ ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಮಾರ್ಚ್ 03 ರಂದು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷಗಳ ಜಂಟಿ ಸರ್ಕಾರವನ್ನು ಶಹ್ಬಾಜ್ ಮುನ್ನಡೆಸಲಿದ್ದಾರೆ.* ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ಶೆಹಬಾಜ್ ಷರೀಫ್ 201 ಮತಗಳನ್ನು ಪಡೆದಿದ್ದಾರೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಅವರು ಘೋಷಿಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಪಿಟಿಐ ಪಕ್ಷದ ಅಭ್ಯರ್ಥಿ ಒಮರ್ ಅಯೂಬ್ ಖಾನ್ ಅವರು 92 ಮತಗಳನ್ನು ಪಡೆದರು.* ಇಮ್ರಾನ್ ಖಾನ್ ಅವರು ಸರ್ಕಾರ ಅವಿಶ್ವಾಸ ನಿರ್ಣಯದಲ್ಲಿ ಸೋತ ನಂತರ ಶೆಹಬಾಜ್ ಷರೀಫ್ ಅವರು ಏಪ್ರಿಲ್ 11, 2022 ರಿಂದ ಆಗಸ್ಟ್ 14, 2023 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. * ಶೆಹಬಾಜ್ ಷರೀಫ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ದು, ಪಾಕಿಸ್ತಾನ್ ಮುಸ್ಲೀಂ ಲೀಗ್ ನವಾಜ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು.* ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಪಿಟಿಐ ಸ್ಥಾಪಕ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಪಿಪಿಪಿ ಮತ್ತು ಪಿಎಂಎಲ್ (ಎನ್) ಸಮ್ಮಿಶ್ರ ಸರ್ಕಾರವನ್ನು ರಚಿಸಲು ಮೈತ್ರಿ ಮಾಡಿಕೊಂಡಿವೆ.* ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಬೆಂಬಲಿತ 93 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ನವಾಜ್ ಷರೀಫ್ ಅವರ ಪಕ್ಷಕ್ಕೆ 75 ಸ್ಥಾನಗಳು ಲಭಿಸಿದರೆ, ಭುಟ್ಟೋ ಅವರ ಪಕ್ಷಕ್ಕೆ 54 ಸ್ಥಾನಗಳು ಲಭಿಸಿವೆ. ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ 17 ಸ್ಥಾನಗಳನ್ನು ಗೆದ್ದಿದೆ.