➤ ಇತ್ತೀಚೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಹೊರತಂದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವೊಂದು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಮತ್ತು ಕಾನೂನು ಹೋರಾಟಕ್ಕೆ ಕಾರಣವಾಗಿದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತಾದ ಉಲ್ಲೇಖಗಳು ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿವೆ.➤ ವಿವಾದದ ಹಿನ್ನೆಲೆ: NCERT ಹೊಸದಾಗಿ ಬಿಡುಗಡೆ ಮಾಡಿದ 'Exploring Society: India and Beyond, Vol II' ಪಠ್ಯಪುಸ್ತಕದ 4ನೇ ಅಧ್ಯಾಯವಾದ 'ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ' (The Role of the Judiciary in our Society) ಎಂಬಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವಿದೆ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಕೋಟ್ಯಂತರ ಪ್ರಕರಣಗಳ ಅಂಕಿಅಂಶಗಳನ್ನು ನೀಡುವ ಮೂಲಕ ವ್ಯವಸ್ಥೆಯನ್ನು ಟೀಕಿಸಲಾಗಿತ್ತು.➤ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದೆ. ಈ ಭೂಮಿಯ ಮೇಲೆ ಯಾರೂ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಿಸಲು ನಾವು ಬಿಡುವುದಿಲ್ಲ. ಎಷ್ಟೇ ದೊಡ್ಡವರಿದ್ದರೂ ಕಾನೂನಿಗಿಂತ ಮೇಲಲ್ಲ," ಎಂದು ಸಿಜೆಐ ಎಚ್ಚರಿಸಿದ್ದಾರೆ. ನ್ಯಾಯಾಂಗದ ಮೇಲೆ ಶಾಶ್ವತ ಪರಿಣಾಮ ಬೀರುವ ಇಂತಹ ಬರಹಗಳು 'ಕ್ರಿಮಿನಲ್ ನ್ಯಾಯಾಂಗ ನಿಂದನೆ' ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಅಚಾತುರ್ಯವೋ ಅಥವಾ ವ್ಯವಸ್ಥಿತ ಪಿತೂರಿಯೋ ಎಂಬ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.➤ NCERT ಕ್ಷಮೆಯಾಚನೆ ಮತ್ತು ಕ್ರಮಗಳು: ವಿವಾದದ ತೀವ್ರತೆ ಅರಿತ NCERT, ಇದು ಅಚಾತುರ್ಯದಿಂದ ನಡೆದ ದೋಷ ಎಂದು ಕ್ಷಮೆಯಾಚಿಸಿದೆ. ಮಂಡಳಿಯು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:- ಪುಸ್ತಕ ಹಿಂಪಡೆಯುವಿಕೆ: ಮುದ್ರಿತವಾಗಿದ್ದ ಸುಮಾರು 2.25 ಲಕ್ಷ ಪ್ರತಿಗಳ ಪೈಕಿ ಮಾರುಕಟ್ಟೆಗೆ ಹೋಗಿದ್ದ 38 ಪ್ರತಿಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ.- ಡಿಜಿಟಲ್ ಪ್ರತಿಗಳ ತೆಗೆದುಹಾಕುವಿಕೆ: ಅಂತರ್ಜಾಲದಿಂದ ಈ ಪಠ್ಯದ ಎಲ್ಲಾ ಡಿಜಿಟಲ್ ಆವೃತ್ತಿಗಳನ್ನು ತೆಗೆದುಹಾಕಲಾಗಿದೆ.- ಮರು ಪರಿಶೀಲನೆ: ತಜ್ಞರ ಸಮಿತಿಯೊಂದಿಗೆ ಸಮಾಲೋಚಿಸಿ ಈ ಅಧ್ಯಾಯವನ್ನು ಸಂಪೂರ್ಣವಾಗಿ ಹೊಸದಾಗಿ ಬರೆಯುವುದಾಗಿ ಮಂಡಳಿ ತಿಳಿಸಿದೆ.➤ ಹಿರಿಯ ವಕೀಲ ಕಪಿಲ್ ಸಿಬಲ್ ಅವರು 8ನೇ ತರಗತಿ ಮಕ್ಕಳಿಗೆ ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ಬೋಧಿಸುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.  ಹೈಕೋರ್ಟ್ ನ್ಯಾಯಾಧೀಶರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸಿಜೆಐ ತಿಳಿಸಿದರು. NCERT ನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ಪುಸ್ತಕಗಳನ್ನು ಜಪ್ತಿ ಮಾಡಲು ಮತ್ತು ಯಾವುದೇ ರಾಜ್ಯಗಳಲ್ಲಿ ಈ ಪುಸ್ತಕದ ಮೂಲಕ ಬೋಧನೆ ಮಾಡದಂತೆ ರಾಜ್ಯ ಶಿಕ್ಷಣ ಇಲಾಖೆಗಳಿಗೆ ಸೂಚಿಸಲಾಗಿದೆ.➤ ನ್ಯಾಯಾಂಗ ನಿಂದನೆ (Contempt of Court): ಸಂವಿಧಾನದ ವಿಧಿ 129 (ಸುಪ್ರೀಂ ಕೋರ್ಟ್) ಮತ್ತು ವಿಧಿ 215 (ಹೈಕೋರ್ಟ್) ಅಡಿಯಲ್ಲಿ ನ್ಯಾಯಾಲಯಗಳಿಗೆ ಶಿಕ್ಷೆ ವಿಧಿಸುವ ಅಧಿಕಾರವಿದೆ.