*  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ್ತಿ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಡಿಸೆಂಬರ್ 30, 2025ರಂದು ನಡೆದ ಶ್ರೀಲಂಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.* ಶ್ರೀಲಂಕಾ ವಿರುದ್ಧ ಐತಿಹಾಸಿಕ ವಿಕೆಟ್ : ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ತಮ್ಮ 152ನೇ ಟಿ20ಐ ವಿಕೆಟ್‌ನ್ನು ಪಡೆದು ಆಸ್ಟ್ರೇಲಿಯಾದ ವೇಗಿ ಮೆಗನ್ ಶಟ್ (151 ವಿಕೆಟ್) ಅವರ ದಾಖಲೆಯನ್ನು ಮುರಿದರು. ಅಂತಿಮ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದು, ಭಾರತ ತಂಡವು 175 ರನ್‌ಗಳನ್ನು ರಕ್ಷಿಸಿ 15 ರನ್‌ಗಳ ಜಯ ಸಾಧಿಸಲು ನೆರವಾದರು.* 5–0 ಸರಣಿ ಜಯದಲ್ಲಿ ಭಾರತದ ಪ್ರಾಬಲ್ಯ: ಈ ದಾಖಲೆ, ಭಾರತವು ಶ್ರೀಲಂಕಾ ವಿರುದ್ಧ 5–0 ಅಂತರದ ಸಂಪೂರ್ಣ ಸರಣಿ ಜಯ ಸಾಧಿಸಿದ ಸಂದರ್ಭದಲ್ಲಿ ಬಂದಿತು. ಸರಣಿ ಪೂರ್ತಿಯಲ್ಲೂ ದೀಪ್ತಿಯವರ ನಿರಂತರ ಮತ್ತು ನಿಯಂತ್ರಿತ ಬೌಲಿಂಗ್ ಭಾರತದ ಮೇಲುಗೈಗೆ ಪ್ರಮುಖ ಕಾರಣವಾಯಿತು. ಈ ಪ್ರದರ್ಶನ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪ್ರಬಲ ಸ್ಥಾನವನ್ನು ಮತ್ತಷ್ಟು ದೃಢಪಡಿಸಿದೆ.* ಮಹಿಳಾ ಟಿ20ಐ ವಿಕೆಟ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ನಿದಾ ದಾರ್ (144 ವಿಕೆಟ್) ಮೂರನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕೂಡ ಅಗ್ರ ಬೌಲರ್‌ಗಳಲ್ಲಿದ್ದಾರೆ. ಭಾರತ ಪರವಾಗಿ, ದೀಪ್ತಿ ಶರ್ಮಾ ಹೊರತುಪಡಿಸಿ ರಾಧಾ ಯಾದವ್ ಮಾತ್ರ 100ಕ್ಕೂ ಹೆಚ್ಚು ಟಿ20ಐ ವಿಕೆಟ್‌ಗಳನ್ನು ಪಡೆದಿರುವುದು ಈ ಸಾಧನೆಯ ವಿಶಿಷ್ಟತೆಯನ್ನು ತೋರಿಸುತ್ತದೆ.* ದೀಪ್ತಿ ಶರ್ಮಾ ಅವರು ಟಿ20 ಅಂತರರಾಷ್ಟ್ರೀಯಗಳಲ್ಲಿ 1,000 ರನ್‌ಗಳು ಮತ್ತು 150 ವಿಕೆಟ್‌ಗಳು ಪಡೆದ ಪುರುಷ–ಮಹಿಳಾ ಎಲ್ಲ ಕ್ರಿಕೆಟರ್‌ಗಳಲ್ಲೂ ಮೊದಲ ಆಟಗಾರ್ತಿ ಎಂಬ ಅಪೂರ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಅವರು ಐಸಿಸಿ ಮಹಿಳಾ ಟಿ20ಐ ಆಲ್‌ರೌಂಡರ್ ಶ್ರೇಯಾಂಕ್  ವಿಶ್ವ ನಂ.1 ಸ್ಥಾನದಲ್ಲಿದ್ದಾರೆ. 133 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ದೀಪ್ತಿ, 2025ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದು, ಭಾರತ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಸ್ವದೇಶದಲ್ಲಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಎಲ್ಲ ಸಾಧನೆಗಳು ದೀಪ್ತಿ ಶರ್ಮಾರನ್ನು ಭಾರತೀಯ ಮಹಿಳಾ ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ಮತ್ತು ಐತಿಹಾಸಿಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಸ್ಥಾಪಿಸಿವೆ.