* ಸರಕಾರಿ ಆದೇಶದಂತೆ ಕಿಲಾರಿ ಜೋಗಯ್ಯ, ಡಾ.ರತ್ನಮ್ಮ ಎಸ್, ರಾಜಶೇಖರ ತಳವಾರ, ಕೆ.ಎಸ್.ಮೃತ್ಯುಂಜಯ, ರತ್ನಮ್ಮ ಬಿ.ಸೋಗಿ ಐವರು ಸಾಧಕರಿಗೆ 2024ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಯನ್ನು CM ಸಿದ್ದರಾಮಯ್ಯನವರು ಪ್ರಧಾನ ಮಾಡಿದ್ದಾರೆ.* ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದವರು :- ಕಿಲಾರೆ ಜೋಗಯ್ಯ - ಚಿತ್ರದುರ್ಗ (ಬುಡಕಟ್ಟು ಸಂಸ್ಕೃತಿ)- ಡಾ.ರತ್ನಮ್ಮ.ಎಸ್ - ಚಾಮರಾಜನಗರ (ಸಮಾಜ ಸೇವೆ)- ರಾಜಶೇಖರ ತಳವಾರ - ಬೆಳಗಾವಿ (ಸಾಮಾಜಿಕ ಕ್ಷೇತ್ರ)- ಕೆಎಸ್ ಮೃತ್ಯುಂಜಯ - ಬೆಂಗಳೂರು ಕೇಂದ್ರ (ಸಾಮಾಜಿಕ ಕ್ಷೇತ್ರ)- ರತ್ನಮ್ಮ ಬಿ ಸೋಗಿ - ಕಲಬುರಗಿ (ರಂಗಭೂಮಿ ಕ್ಷೇತ್ರ)* ಬೆಂಗಳೂರು ವಿಭಾಗ: ಕಿಲಾರಿ ಜೋಗಯ್ಯ             ಕಿಲಾರಿ ಜೋಗಯ್ಯ ಅವರು ಗಡ್ಡದಾರಹಟ್ಟಿ, ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯವರು.   ದೇವರ ಎತ್ತುಗಳ ರಕ್ಷಣೆ, ಜಾನುವಾರುಗಳ ಪೋಷಣೆ, ಸ್ಥಳೀಯ ಬುಡಕಟ್ಟು ಸಮುದಾಯದ ಸಂಸ್ಕೃತಿಯ ಸಂರಕ್ಷಣೆ, ಜಾನುವಾರುಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬುಡಕಟ್ಟು ಸಂಸ್ಕೃತಿಯ ಆಚರಣೆಯ ಮೂಲಕ ಜಾನುವಾರುಗಳ ಸಂತತಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮೀಣ ಸೊಗಡ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಇವರ ಅನುಪಮ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗಿದೆ. * ಮೈಸೂರು ವಿಭಾಗ: ಡಾ. ರತ್ನಮ್ಮ ಎಸ್.‌          ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಹೋಬಳಿಯ ಮದ್ದೂರು ಕಾಲೋನಿಯವರಾದ ಡಾ. ರತ್ನಮ್ಮ ಎಸ್.‌ ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸಮುದಾಯದ ಮನವೊಲಿಸಿ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ದಾಖಲಿಸುವುದು, ಸಮುದಾಯದ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಸಮುದಾಯದವರಿಗೆ ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು. ಸಮುದಾಯದ ಕಲೆ, ಕುಲ ಕಸುಬು, ಸಂಸ್ಕೃತಿಯ ಸಂರಕ್ಷಿಸುವುದು ಹಾಗೂ ಪೋಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ 2024ರ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿನ್ನು ನೀಡಲಾಗಿದೆ. * ಬೆಳಗಾವಿ ವಿಭಾಗ: ರಾಜಶೇಖರ ತಳವಾರ   ಬೆಳಗಾವಿಯ ಗಾಂಧಿನಗರದವರಾದ ಇವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಬುಡಕಟ್ಟು ಸಮುದಾಯವು ವಾಸಿಸುವ ಮೂಲಭೂತ ಸೌಕರ್ಯಗಳಿಲ್ಲದ ಗುಡ್ಡಗಾಡು ಪ್ರದೇಶಗಳ ಬಗ್ಗೆ ವಿವಿಧ ಇಲಾಖೆಗಳ ಗಮನಕ್ಕೆ ತಂದು ಆ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ದೊರಕುವಂತೆ ಹಾಗೂ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಶಿಕ್ಷಣ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಶಿಬಿರ, ತರಬೇತಿಗಳನ್ನು ಆಯೋಜಿಸುವುದು. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮುಂದುರೆಯಲು ಸರ್ಕಾರದ ನೆರವು ದೊರಕಿಸುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸಲ್ಲಿಸಿರುವ ಸಮಾಜ ಸೇವೆಯನ್ನು ಗುರುತಿಸಿ ಇವರಿಗೆ 2024ರ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿನ್ನು ನೀಡಲಾಗಿದೆ. * ಬೆಂಗಳೂರು ಕೇಂದ್ರ : ಕೆ. ಎಸ್.‌ ಮೃತ್ಯುಂಜಯ        ಬೆಂಗಳೂರು ವಾಸಿಯಾದ ಶ್ರೀ ಕೆ.ಎಸ್.‌ ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡದ ಸಮುದಾಯದ ಶೈಕ್ಷಣಿಕ, ಆರ್ಥಿಕ ಆಭಿವೃ‍ದ್ಧಿ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮುದಾಯದವರಿಗೆ ದೊರಕಿಸಲು ಶ್ರಮಿಸಿದ್ದಾರೆ. ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಅಭಿವೃ‍ದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕಾರ್ಯಾಗಾರ, ಶಿಭಿರ, ಚಿಂತನ-ಮಂಥನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪ್ರತಿನಿಧಿಸುತ್ತಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗಿದೆ.* ಕಲಬುರ್ಗಿ ವಿಭಾಗ: ರತ್ನಮ್ಮ ಬಿ. ಸೋಗಿ             ವಿಜಯನಗರ ಜಿಲ್ಲೆ ಹರಪನಹಳ್ಳಿಯವರಾದ ಇವರು ವೃತ್ತಿ ರಂಗಭೂಮಿ ಖ್ಯಾತ ಕಲಾವಿದರಾಗಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದರಾಗಿದ್ದಾರೆ. ಐತಿಹಾಸಿಕ, ಪೌರಾಣಿಕ, ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಂಗ ಭೂಮಿ ಕ್ಷೇತ್ರದ ಉಳಿವು ಹಾಗೂ ಬೆಳವಣಿಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜದ ಒಳಿತಿಗಾಗಿ ಹಾಗೂ ಅನೇಕ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ತಮ್ಮ ಅಭಿನಯದ ಮೂಲಕ ಜಾಗೃತಿ ಮೂಡಿಸಿದಾರೆ. ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿದ ಗಣನೀಯ ಕಲಾ ಸೇವೆಯನ್ನು ಗುರುತಿಸಿ ಇವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗಿದೆ.