Job Description: ➤ ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ (Chief of the Army Staff - COAS) ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ (Lt Gen Dhiraj Seth) ಅವರನ್ನು ನೇಮಕ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನೇಮಕಾತಿಗೆ ಅಧಿಕೃತ ಅಂಕಿತ ಹಾಕಿದ್ದಾರೆ. ಸದ್ಯ ಭೂಸೇನೆಯ ವೈಸ್ ಚೀಫ್ (ಉಪ ಮುಖ್ಯಸ್ಥ) ಆಗಿ ಕಾರ್ಯನಿರ್ವಹಿಸುತ್ತಿರುವ ಧೀರಜ್ ಸೇಠ್ ಅವರು 2026ರ ಜೂನ್ 30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.➤ ಹಾಲಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30 ರಂದು ನಿವೃತ್ತಿ ಹೊಂದಲಿದ್ದು, ಅವರ ಉತ್ತರಾಧಿಕಾರಿಯಾಗಿ ಧೀರಜ್ ಸೇಠ್ ದೇಶದ ರಕ್ಷಣಾ ಪಡೆಯ ಅತ್ಯುನ್ನತ ಜವಾಬ್ದಾರಿಯನ್ನು ಹೊರಲಿದ್ದಾರೆ. ಇವರ ಅಧಿಕಾರಾವಧಿ 2028ರ ಆಗಸ್ಟ್ 31ರವರೆಗೆ ಇರಲಿದೆ.➤ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರ ಹಿನ್ನೆಲೆ ಮತ್ತು ಸಾಧನೆಗಳು: ಆರಂಭಿಕ ಜೀವನ ಮತ್ತು ಶಿಕ್ಷಣ: ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿ (IMA) ಯ ಹಳೆಯ ವಿದ್ಯಾರ್ಥಿಯಾಗಿರುವ ಧೀರಜ್ ಸೇಠ್ ಅವರು, ಡಿಸೆಂಬರ್ 1986 ರಲ್ಲಿ ಭಾರತೀಯ ಸೇನೆಯ ಆರ್ಮರ್ ಕಾರ್ಪ್ಸ್ (ಕವಚ ಪಡೆ - 2nd Lancers) ವಿಭಾಗದ ಅಧಿಕಾರಿಯಾಗಿ ನಿಯುಕ್ತಿಗೊಂಡರು. ಸುದೀರ್ಘ ಸೇವೆ: ಕಳೆದ ಸುಮಾರು 40 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ವಿವಿಧ ಹಂತಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಕಾರ್ಯಾಚರಣೆಗಳ ನೇತೃತ್ವ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನೇತೃತ್ವ ವಹಿಸಿದ ಅಪಾರ ಅನುಭವ ಇವರಿಗಿದೆ. ಅಲ್ಲದೆ ಮರುಭೂಮಿ ವಲಯದಲ್ಲಿ ಆರ್ಮರ್ಡ್ ರೆಜಿಮೆಂಟ್ ಮತ್ತು ಪಶ್ಚಿಮ ಗಡಿಯಲ್ಲಿ ಆರ್ಮರ್ಡ್ ಬ್ರಿಗೇಡ್ ಅನ್ನು ಮುನ್ನಡೆಸಿದ್ದಾರೆ. 'ಆಪರೇಷನ್ ಸಿಂದೂರ' ಮತ್ತು ಜಂಟಿ ಸಮರಾಭ್ಯಾಸ: ಭಾರತೀಯ ಸೇನೆಯ ಅತ್ಯಂತ ಪ್ರಮುಖ ಕಾರ್ಯಾಚರಣೆಯಾದ 'ಆಪರೇಷನ್ ಸಿಂದೂರ'ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಪಶ್ಚಿಮ ಗಡಿಯಲ್ಲಿ ನಡೆದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಮೂರು ಜಂಟಿ ಸಮರಾಭ್ಯಾಸಗಳ ಉಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಇವರದ್ದಾಗಿದೆ. ಪ್ರಮುಖ ಕಮಾಂಡ್ ನೇತೃತ್ವ: ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದ ನಂತರ ಅವರು ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ಫೋರ್ಸ್ ಆದ 'ಸುದರ್ಶನ ಚಕ್ರ ಕೋರ್ಸ್' ಕಮಾಂಡರ್ ಆಗಿ, ದೆಹಲಿ ಏರಿಯಾದ ಜಿಒಸಿ (GOC) ಆಗಿ ಕಾರ್ಯನಿರ್ವಹಿಸಿದ್ದರು. ತದನಂತರ ಅತ್ಯಂತ ಪ್ರಮುಖ ವಿಭಾಗಗಳಾದ 'ಸೌತ್ ವೆಸ್ಟರ್ನ್ ಕಮಾಂಡ್' ಮತ್ತು 'ಸದರ್ನ್ ಕಮಾಂಡ್' (ದಕ್ಷಿಣ ಕಮಾಂಡ್) ಎರಡರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅಪರೂಪದ ಹೆಗ್ಗಳಿಕೆ ಇವರದ್ದಾಗಿದೆ. ಅಂತರರಾಷ್ಟ್ರೀಯ ಅನುಭವ: ಅಂಗೋಲಾದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ (United Nations Mission in Angola) ಆಪರೇಷನ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ಯಾರಿಸ್‌ನಲ್ಲಿ ಕಮಾಂಡ್ ಮತ್ತು ಸ್ಟಾಫ್ ಕೋರ್ಸ್ ಹಾಗೂ ಅಮೆರಿಕದಲ್ಲಿ ಇಂಟರ್ನ್ಯಾಷನಲ್ ಡಿಫೆನ್ಸ್ ಅಕ್ವಿಸಿಷನ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದಾರೆ. ಸೇನಾ ಗೌರವಗಳು: ದೇಶಕ್ಕೆ ಸಲ್ಲಿಸಿದ ಅತ್ಯುನ್ನತ ಸೇವೆಯನ್ನು ಪರಿಗಣಿಸಿ ಇವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM), ಉತ್ತಮ ಯುದ್ಧ ಸೇವಾ ಪದಕ (UYSM) ಮತ್ತು ಅತಿ ವಿಶಿಷ್ಟ ಸೇವಾ ಪದಕ (AVSM) ನೀಡಿ ಗೌರವಿಸಲಾಗಿದೆ.ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ