* ತಮಿಳುನಾಡಿನ ಕೂಡಂಕುಳಂ ಅಣು ವಿದ್ಯುತ್ ಸ್ಥಾವರ (KKNPP) ತನ್ನ ಮೂರನೇ ಘಟಕದ ಕಾರ್ಯಾರಂಭದತ್ತ ಒಂದು ಮಹತ್ವದ ಮೈಲುಗಲ್ಲು ಸ್ಪರ್ಶಿಸಿದೆ. ರಷ್ಯಾದಿಂದ ಆರಂಭಿಕ ಲೋಡ್‌ಗಾಗಿ ಅಗತ್ಯವಾದ ಪರಮಾಣು ಇಂಧನದ ಮೊದಲ ಸರಕು ಈಗ ಸ್ಥಾವರಿಗೆ ತಲುಪಿದೆ. ಈ ಪರಮಾಣು ಇಂಧನವನ್ನು ರಷ್ಯಾದ ರಾಜ್ಯಪಾಲಿತ ಕಂಪನಿ ರೋಸಾಟಮ್ ಪೂರೈಸಿದ್ದು, ಇದು ಇಂಡೋ–ರಷ್ಯಾ ಅಣುಶಕ್ತಿ ಸಹಕಾರದ ನಿರಂತರ ಮತ್ತು ಪ್ರಮುಖ ಭಾಗವಾಗಿದೆ.* ಕೂಡಂಕುಳಂ ಅಣು ಸ್ಥಾವರ ಭಾರತದ ಅತಿ ದೊಡ್ಡ ಅಣುಶಕ್ತಿ ಯೋಜನೆ ರಷ್ಯಾದಿಂದ ಸಹಯೋಗದಡಿಯಲ್ಲಿ VVER-1000 ಮಾದರಿಯ ರಿಯಾಕ್ಟರ್‌ಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಇದು ಈಗಾಗಲೇ ಯೂನಿಟ್ 1 ಮತ್ತು 2 ಕಾರ್ಯ ನಿರ್ವಹಿಸುತ್ತಿದ್ದು, ಯೂನಿಟ್ 3, 4, 5 ಮತ್ತು 6 ನಿರ್ಮಾಣ ಹಂತದಲ್ಲಿವೆ.* ಈಗ ತಲುಪಿದ ಇಂಧನವು ಯೂನಿಟ್-3 ರಿಯಾಕ್ಟರ್ ಆರಂಭಿಕ ಕಾರ್ಯಾಚರಣೆಗೆ ಅಗತ್ಯವಾದ ಮೊದಲ ಹಂತವಾಗಿದೆ. ಪರಮಾಣು ಇಂಧನದ ಈ ವಿತರಣೆಯು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ಭಾರತ ಪ್ರವಾಸದ ವೇಳೆಗೆ ಬಂದಿದೆ. ಇಂಧನ ವಿತರಣೆಯು ಈ ಶೃಂಗಸಭೆಯ ಸಂದರ್ಭದಲ್ಲಿ ಅಣುಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳ ಆಳವಾದ ಸಹಕಾರದ ಉದಾಹರಣೆ ಆಗಿ ಕಾಣಿಸಿಕೊಂಡಿದೆ.ಈ ವಿತರಣೆಯು ಭಾರತ–ರಷ್ಯಾ ಸ್ನೇಹದ ಮತ್ತೊಂದು ಸಂಕೇತವಾಗಿದ್ದು, ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಕೂಡಂಕುಳಂ ಮೂರನೇ ರಿಯಾಕ್ಟರ್ ಶೀಘ್ರ ಕಾರ್ಯಾರಂಭಕ್ಕೆ ಇದು ಮಹತ್ವದ ಚಲನಶಕ್ತಿಯಾಗಿ ಪರಿಣಮಿಸಿದೆ.