* ಮಧ್ಯಪ್ರದೇಶದ ಕುನೂ ರಾಷ್ಟ್ರೀಯ ಉದ್ಯಾನದ ಆವರಣದ ನಿಗಾದಲ್ಲಿ ಇರಿಸಲಾಗಿದ್ದ ಚೀತಾಗಳನ್ನು ಶೀಘ್ರದಲ್ಲಿಯೇ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. *  ಮುಂಗಾರು ಅವಧಿ ಬಳಿಕ ಈ ಚೀತಾಗಳು ಮತ್ತು ಅವುಗಳ ಮರಿಗಳನ್ನು ಅರಣ್ಯಕ್ಕೆ ಬಿಡಲು ಕೇಂದ್ರ ಸರ್ಕಾರದ ಚೀತಾ ಯೋಜನೆ ಸಮಿತಿಯು ನಿರ್ಧರಿಸಿದೆ.* ಸಮಿತಿಯ ಸದಸ್ಯರು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಕುನೂ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ, ಚೀತಾಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿದರು.* ಈ ಚೀತಾಗಳನ್ನು ಆಫ್ರಿಕಾದಿಂದ ತರಲಾಗಿತ್ತು.ಕುನೊ ಉದ್ಯಾನದಲ್ಲಿ 12 ಮರಿಗಳು ಸೇರಿ 25 ಚೀತಾಗಳಿವೆ. 2022ರ ಸೆಪ್ಟೆಂಬರ್‌ನಲ್ಲಿ ಮೊದಲ ತಂಡದಲ್ಲಿ ಆಫ್ರಿಕಾದ  ನಮೀಬಿಯಾದಿಂದ 8. ಎರಡನೇ ತಂಡದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು, ಈ ಪೈಕಿ ಏಳು ಚೀತಾಗಳು ಮೃತಪಟ್ಟಿವೆ. ಭಾರತಕ್ಕೆ ಚೀತಾಗಳನ್ನು ತಂದ ನಂತರ ಅವು 17 ಮರಿಗಳಿಗೆ ಜನ್ಮ ನೀಡಿದ್ದು, ಈ ಪೈಕಿ 12 ಬದುಕುಳಿದಿವೆ.* ಈ ಮೊದಲು ಚೀತಾಗಳನ್ನು ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಮೂರು ಚೀತಾಗಳು ಮೃತಪಟ್ಟ ಕಾರಣ ಮತ್ತೆ ಅವುಗಳನ್ನು ವಾಪಸ್ ತರಲಾಗಿತ್ತು. ಈಗ ಅರಣ್ಯಕ್ಕೆ ಬಿಡಲು ಕೇಂದ್ರ ಸರ್ಕಾರದ ಚೀತಾ ಯೋಜನೆ ಸಮಿತಿಯು ನಿರ್ಧರಿಸಿದೆ.