* ಕೇಂದ್ರ ನೀತಿ ಆಯೋಗದ ವರದಿಯ ಪ್ರಕಾರ 2022-23 ಕ್ಕೆ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ.* ರಾಷ್ಟ್ರೀಯ ಬಹುಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ಆಧಾರಿತ ವರದಿ ಪ್ರಕಾರ ದೇಶದಲ್ಲಿ 2013-14ರಲ್ಲಿ ಶೇ 29.17ರಷ್ಟಿದ್ದ ಬಡತನ ಪ್ರಮಾಣವು 2022-23ರಲ್ಲಿ ಶೇ 11.28ರಷ್ಟಕ್ಕೆ ಇಳಿಕೆಯಾಗಿದೆ. * ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಬಡವರ ಸಂಖ್ಯೆಯು ತೀವ್ರಗತಿಯಲ್ಲಿ ಕಡಿಮೆಯಾಗಿದೆ ಎಂದು NITI ಆಯೋಗ್ ಜನವರಿ 15 ರಂದು ವರದಿಯಲ್ಲಿ ತಿಳಿಸಿದೆ.* 'ಇದು ನಮ್ಮ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯ ಭವಿಷ್ಯವನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರದಿಂದ ಬದ್ಧವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.* ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 5.94 ಕೋಟಿ, ಬಿಹಾರದಲ್ಲಿ 3.77 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.30 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ.* ದೇಶದ ಬಹು ಆಯಾಮಗಳ ಬಡತನದ ಪ್ರಮಾಣವನ್ನು ಶೇ 1ಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ತಿಳಿಸಿದ್ದಾರೆ.* ಪೋಷಣ್‌ ಅಭಿಯಾನ್' ಮತ್ತು 'ಅನೀಮಿಯಾ ಮುಕ್ತ ಭಾರತ್', 'ಜನಧನ್ ಬ್ಯಾಂಕ್ ಖಾತೆ', ಆಹಾರ ಭದ್ರತೆ, ಎಂನರೇಗಾ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನರಿಗೆ ಬಡತನದಿಂದ ಹೊರಬರಲು ನೆರವಾಗಿವೆ ಎಂದು ನೀತಿ ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ. * ಆರೋಗ್ಯ, ಶಿಕ್ಷಣ ಮತ್ತು ಜೀವನದ ಗುಣಮಟ್ಟ, ಪೌಷ್ಟಿಕ ಆಹಾರ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೌಲಭ್ಯ ಮತ್ತಿತರ ಅಂಶಗಳನ್ನು ಆಧರಿಸಿ ಬಹು ಆಯಾಮಗಳ ಬಡತನ ಸೂಚ್ಯಂಕವನ್ನು ಅಳೆಯಲಾಗುತ್ತದೆ.