* ಸುಪ್ರೀಂ ಕೋರ್ಟ್ನಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಯ ಬದಲು ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಹಾಗೇ ಈ ಹಿಂದಿನ ಪ್ರತಿಮೆಯ ಎಡಗೈಯಲ್ಲಿದ್ದ ಕತ್ತಿಯ ಬದಲಾಗಿ ಹೊಸ ನ್ಯಾಯದೇವತೆಯ ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ.* ಸಾಮ್ರಾಜ್ಯಶಾಹಿ ಆಡಳಿತದ ಅವಧಿಯ ಈ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರುತ್ತಿತ್ತು. ಕೈಯಲ್ಲಿ ಆಕೆ ಹಿಡಿದಿದ್ದ ಖಡ್ಗ, ಅನ್ಯಾಯವನ್ನು ತಡೆಯುವ ಆಕೆಯ ಅಧಿಕಾರ ಹಾಗೂ ಶಕ್ತಿಯ ಪ್ರತೀಕವಾಗಿತ್ತು.* ಬ್ರಿಟಿಷ್ ಪರಂಪರೆಯಿಂದ ಭಾರತ ಮುಂದಕ್ಕೆ ಚಲಿಸಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದಾರೆ. ಅವರ ಪ್ರಕಾರ, ಕಾನೂನು ಎಂದೂ ಕುರುಡಾಗಿರಲು ಸಾಧ್ಯವಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ.* "ನ್ಯಾಯದೇವತೆ ಕೈಯಲ್ಲಿ ಖಡ್ಗದ ಬದಲು ಸಂವಿಧಾನವನ್ನು ಹಿಡಿದಿರಬೇಕು. ಈ ಮೂಲಕ ಸಂವಿಧಾನದ ಮೂಲಕವೇ ಆಕೆ ನ್ಯಾಯದಾನ ಮಾಡುತ್ತಾಳೆ ಎನ್ನುವ ಸಂದೇಶ ದೇಶಕ್ಕೆ ತಲುಪಬೇಕು ಎನ್ನುವುದು ಅವರ ಆಶಯ" ಎಂದು ಮೂಲಗಳು ಸ್ಪಷ್ಟಪಡಿಸಿವೆ.* ಖಡ್ಗ ಹಿಂಸೆಯ ಪ್ರತೀಕವಾಗಿದ್ದು, ನ್ಯಾಯಾಲಯಗಳು ಸಂವಿಧಾನದ ಕಾನೂನುಗಳ ಅನ್ವಯ ನ್ಯಾಯದಾನ ಮಾಡುತ್ತವೆ ಎನ್ನುವುದು ಸಿಜೆಐಯವರ ಸಮರ್ಥನೆ.