* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಜೂನ್‌ 22ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 53ನೇ ಸಭೆ ನಡೆಯಲಿದೆ. ನವದೆಹಲಿಯಲ್ಲಿ ಸಭೆಯನ್ನು ಆಯೋಜಿಸಲಾಗಿದೆ.* ಎಂಟು ತಿಂಗಳ ಬಳಿಕ ನಡೆಯುತ್ತಿರುವ ಈ ಸಭೆಯಲ್ಲಿ ಆನ್‌ಲೈನ್‌ ಗೇಮಿಂಗ್‌ ವಲಯದ ಮೇಲೆ ವಿಧಿಸಿರುವ ಶೇ 28ರಷ್ಟು ಜಿಎಸ್‌ಟಿ ಕುರಿತಂತೆ ಪರಾಮರ್ಶೆ ನಡೆಸುವ ಸಾಧ್ಯತೆಯಿದೆ.* ಜಿಎಸ್‌ಟಿ ಕಾಯ್ದೆಗೆ ತಂದಿರುವ ತಿದ್ದುಪಡಿ ಅನ್ವಯ ಆನ್‌ಲೈನ್ ಆಟಗಳು ಹಾಗೂ ಕ್ಯಾಸಿನೊಗಳಲ್ಲಿ ಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಕಳೆದ ವರ್ಷದ ಅಕ್ಟೋಬರ್ 1ರಿಂದ ಕ್ಯಾಸಿನೊ, ಕುದುರೆ ರೇಸ್ ಮತ್ತು ಆನ್‌ಲೈನ್ ಆಟಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.* ಈ ಬಗ್ಗೆ ಆರು ತಿಂಗಳ ಬಳಿಕ ಪರಾಮರ್ಶೆ ನಡೆಸಲಾಗುವುದು ಎಂದು ಜಿಎಸ್‌ಟಿ ಜಾರಿಯ ವೇಳೆ ಮಂಡಳಿಯು ಹೇಳಿತ್ತು. ಮಂಡಳಿಯು ಕೈಗೊಂಡಿದ್ದ ನಿರ್ಣಯದ ಪ್ರಕಾರ ಏಪ್ರಿಲ್‌ನಲ್ಲಿ ಪರಾಮರ್ಶೆ ನಡೆಸಬೇಕಿತ್ತು. ಆದರೆ, ಸಭೆ ನಡೆದಿರಲಿಲ್ಲ. ಹಾಗಾಗಿ, ಈ ಸಭೆಯಲ್ಲಿ ಆನ್‌ಲೈನ್‌ ಗೇಮಿಂಗ್‌ ವಲಯದ ಬಗ್ಗೆ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.