* ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶಾಲೆಗಳಲ್ಲೂ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರಕಾರದ ಪ್ರಧಾನ ಕಾರ್ಯದರ್ಶಿ ಜೂನ್ 13 ರಂದು (ಗುರುವಾರ) ಆದೇಶ ಹೊರಡಿಸಿದೆ.* ಕೇಂದ್ರಾಡಳಿತ ಪ್ರದೇಶದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ರಾಷ್ಟ್ರಗೀತೆಯೊಂದಿಗೆ ಬೆಳಗಿನ ತರಗತಿ ಆರಂಭಿಸುವಂತೆ ಸೂಚಿಸಿದೆ. ಜೊತೆಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸ ಲಾಗಿದೆ. ಬೆಳಗಿನ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ರಾಷ್ಟ್ರಗೀತೆ ಹಾಡುವುದರಿಂದ ಏಕತೆಯ ಜತೆಗೆ ಶಿಸ್ತಿನ ಭಾವನೆ ಮೂಡಲಿದೆ ಎಂದು ತಿಳಿಸಿದೆ.* ರಾಷ್ಟ್ರಗೀತೆ ಹಾಡುವುದು ಮತ್ತು ಶಾಲೆಗಳಲ್ಲಿ ಸಾಮೂಹಿಕ ಸಭೆ ಸೇರುವಿಕೆ ನೈತಿಕ ಸಮಗ್ರತೆ, ಹಂಚಿಕೆಯ ಸಮುದಾಯ ಮತ್ತು ಮಾನಸಿಕ ನೆಮ್ಮದಿಯ ಮೌಲ್ಯಗಳನ್ನು ಪೋಷಿಸುವ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. * ಮಹತ್ವದ ಆಚರಣೆಗಳು ಜಮ್ಮು ಮತ್ತು ಕಾಶ್ಮೀರದ ವಿವಿಧ ಶಾಲೆಗಳಲ್ಲಿ ನಡೆಯುತ್ತಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಣ ಇಲಾಖೆ, ರಾಷ್ಟ್ರಗೀತೆ ಕಡ್ಡಾಯ ಸೇರಿದಂತೆ 16 ಸೂಚನೆಗಳನ್ನು ಪಾಲಿಸಲು ಶಾಲೆಗಳಿಗೆ ನಿರ್ದೇಶನ ನೀಡಿದೆ.* ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ದ್ರವ್ಯಗಳ ಹಾವಳಿ ವಿರುದ್ಧ ಬೆಳಿಗ್ಗೆ ಸಭೆಗಳನ್ನು ಸೇರಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.* ಬೆಳಗಿನ ಅಸೆಂಬ್ಲಿಯು 20 ನಿಮಿಷಗಳವರೆಗೆ ಇರುತ್ತದೆ ಎಂದು ಶಾಲೆಗಳಿಗೆ ನಿರ್ದೇಶಿಸಲಾಗಿದೆ, ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ದಿನದ ಪ್ರಾರಂಭದಲ್ಲಿ ಗೊತ್ತುಪಡಿಸಿದ ಪ್ರದೇಶದಲ್ಲಿ ಸೇರಬೇಕಾಗುತ್ತದೆ.