* ಜಗತ್ತಿನಲ್ಲಿ ಸೌರಶಕ್ತಿ ಉತ್ಪಾದನೆ ಮತ್ತು ಬಳಕೆ ಎರಡೂ ಹೆಚ್ಚಾಗಿದ್ದು ಕಳೆದ ವರ್ಷ ವಿಶ್ವದ ಎಲ್ಲ ರಾಷ್ಟ್ರಗಳು 347 ಗಿಗಾ ಸೌರಶಕ್ತಿಯನ್ನು ಉತ್ಪಾದಿಸಿವೆ.* 2022ಕ್ಕೆ ಹೋಲಿಸಿದರೆ ಶೇ.74ರಷ್ಟು ಸೌರಶಕ್ತಿ ಉತ್ಪಾದನೆ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ವರದಿ ಹೇಳಿದೆ. ಸೋಲಾರ್ ಪ್ಯಾನೆಲ್‌ಗಳಿಗೆ ತಗಲುವ ವೆಚ್ಚ ಮತ್ತು ಸರಕಾರದ ಬೆಂಬಲಿತ ನೀತಿಗಳಿಂದ ಈ ತ್ವರಿತ ಬೆಳವಣಿಗೆಯಾಗಿದೆ.* ಒಟ್ಟು ಸೌರಶಕ್ತಿಯಲ್ಲಿ ಶೇ.63ರಷ್ಟನ್ನು ಚೀನಾ ಉತ್ಪಾದಿಸಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಭಾರತ, ಅಮೆರಿಕ. ಜರ್ಮನಿ, ಬ್ರೆಜಿಲ್, ಸ್ಪೇನ್, ಇಟಲಿ, ನೆದರ್ಲೆಂಡ್, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳಿವೆ.* ಸೌರಶಕ್ತಿ ಉತ್ಪಾದನೆ ಹೆಚ್ಚಳವು ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ. ದ್ಯುತಿವಿದ್ಯುಜ್ಜನಕ ವಲಯದಲ್ಲಿ ಜಾಗತಿಕವಾಗಿ 2022ರಲ್ಲಿ 4.9 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿತ್ತು. 2023ರಲ್ಲಿ ಈ ಪ್ರಮಾಣ 7.1 ಮಿಲಿಯನ್‌ಗೆ ಏರಿಕೆಯಾಗಿದೆ. ಈ ಉದ್ಯೋಗಗಳ ಪೈಕಿ ಚೀನಾದಲ್ಲಿ ಸುಮಾರು 4.6 ಮಿಲಿಯನ್ ಹುದ್ದೆಗಳು ಸೃಷ್ಟಿಯಾಗಿವೆ. ಭಾರತದಲ್ಲಿ 3,18,600 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಯೂರೋಪ್ ರಾಷ್ಟ್ರಗಳಲ್ಲಿ ಸುಮಾರು 7,57,500, ಅಮೆರಿಕದಲ್ಲಿ 2,80,000 ಮತ್ತು ಬ್ರೆಜಿಲ್‌ನಲ್ಲಿ 2,64,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವರದಿ ಹೇಳಿದೆ.* ಸೌರಶಕ್ತಿ ಉತ್ಪಾದನೆಯನ್ನು ಇದೇ ಮಟ್ಟದಲ್ಲಿ ಕಾಪಿಟ್ಟುಕೊಳ್ಳಲು ಸಮಗ್ರ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ.* ಸಾರ್ವಜನಿಕ, ಖಾಸಗಿ ಸಂಸ್ಥೆಗಳು, ಎನ್ಜಿಒಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಂಸ್ಥೆಗಳು ಸಮುದಾಯಗಳನ್ನು ಒಳಗೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.