* ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ ದೊರೆತಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ. ಯಕ್ಷಗಾನ ಸಂಸ್ಥೆಯೊಂದು ವಿಶ್ವಸಂಸ್ಥೆಯ ಮಾನ್ಯತೆಗೆ ಪಾತ್ರರಾಗಿರುವುದು ಇದೇ ಪ್ರಥಮ ಬಾರಿ* ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ಯುನೆಸ್ಕೊದಿಂದ ಮಾನ್ಯತೆ ಪಡೆದ ಮೊದಲ ಯಕ್ಷಗಾನ ಸಂಸ್ಥೆಯಾಗಿದೆ. * ಜೂ.11 ಹಾಗೂ 12ರಂದು ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಅಧಿಕೃತವಾಗಿ ಗುರುತಿಸಲಾಯಿತು ಮತ್ತು ಆಯ್ಕೆ ಮಾಡಲಾಯಿತು. ಯುನೆಸ್ಕೊ (UNESCO) ತನ್ನ ಹತ್ತನೇ ಅಧಿವೇಶನದಲ್ಲಿ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್ ಸರ್ಕಾರಿ ಸಮಿತಿಗೆ ಸಲಹಾ ಸೇವೆಗಳನ್ನು ನೀಡಲು 58 ಸರ್ಕಾರೇತರ ಸಂಸ್ಥೆಗಳಿಗೆ (NGOs) ಮಾನ್ಯತೆ ನೀಡಿದೆ. ಇದರಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಕೂಡ ಒಂದಾಗಿದೆ.* ಯುನೆಸ್ಕೊ ಮಾನ್ಯತೆಗೆ ಇಡಗುಂಜಿ ಮಂಡಳಿ ಸುದೀರ್ಘವಾಗಿ, ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ ಈ ಎಲ್ಲ ಪ್ರಯತ್ನ ಹಾಗೂ ಸಾಧನೆಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವ ಎಂದು ಕೆರೆಮನೆ ಶಿವಾನಂದ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. * ಕೆರೆಮನೆ ಯಕ್ಷಗಾನ ಮಂಡಳಿ ಸ್ವಾತಂತ್ಯ ಪೂರ್ವದಲ್ಲಿ 1934ರಲ್ಲಿ ಸ್ಥಾಪನೆಯಾಗಿ ಈಗ 90ನೇ ವರ್ಷದ ಸಂಭ್ರಮದಲ್ಲಿದೆ. ಈ ಮಂಡಳಿಯು ಯಕ್ಷಗಾನ ಪ್ರದರ್ಶನಗಳು, ಗುರುಕುಲದ ಮೂಲಕ ಶಿಕ್ಷಣ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಂತಹ ರಾಷ್ಟ್ರೀಯ ಉತ್ಸವಗಳು, ಸಂಶೋಧನೆ, ಕಾರ್ಯಾಗಾರಗಳು, ಭಾಸಂ, ಪ್ರಾತ್ಯಕ್ಷಿಕೆ, ಅಧ್ಯಯನ ಮತ್ತು ಶಾಲೆಗಳಲ್ಲಿ ಯಕ್ಷಗಾನವನ್ನು ತರುವ “ಆಟವೇ ಪಟ” ಎಂಬ ಉಪಕ್ರಮ ಇವೇ ಮುಂತಾದವುಗಳಲ್ಲಿ ಕಳೆದ 90 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ. * ಮಂಡಳಿಯು ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್‌, ಸ್ಪೇನ್, ಬಹ್ರೇನ್, ಫ್ರಾನ್ಸ್, ಚೀನಾ, ನೇಪಾಳ ಮೊದಲಾದ ದೇಶಗಳು ಸೇರಿದಂತೆ 9,000 ಪ್ರದರ್ಶನಗಳ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.