➤ ಎಟರ್ನಲ್ ಗ್ರೂಪ್ (ಹಿಂದಿನ ಜೊಮ್ಯಾಟೊ) ಸಂಸ್ಥೆಯ ಸಿಇಒ ಸ್ಥಾನಕ್ಕೆ ಸಂಸ್ಥಾಪಕ ದೀಪಿಂದರ್ ಗೋಯಲ್ ರಾಜೀನಾಮೆ ನೀಡಿದ್ದು, ಬ್ಲಿಂಕಿಟ್ (Blinkit) ಸಂಸ್ಥಾಪಕ ಅಲ್ಬಿಂದರ್ ಧಿಲ್ಲೋನ್ ನೂತನ ಗ್ರೂಪ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೊಸ ಉದ್ಯಮಶೀಲ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಗೋಯಲ್ ಈ ನಿರ್ಧಾರ ಕೈಗೊಂಡಿದ್ದು, ಕಂಪನಿಯ ವೈಸ್ ಚೇರ್ಮನ್ ಆಗಿ ದೀಪಿಂದರ್ ಗೋಯಲ್  ಮುಂದುವರಿಯಲಿದ್ದಾರೆ. ಕಂಪನಿಯ ದೈನಂದಿನ ಕಾರ್ಯಾಚರಣೆ ಮತ್ತು ಬೆಳವಣಿಗೆಯ ಜವಾಬ್ದಾರಿ ಇನ್ನು ಮುಂದೆ ಧಿಲ್ಲೋನ್ ಅವರ ಹೆಗಲೇರಲಿದೆ.➤ ದೀಪಿಂದರ್ ಗೋಯಲ್ ಅವರು ಸಾರ್ವಜನಿಕ ಕಂಪನಿಯ ವ್ಯಾಪ್ತಿಯಿಂದ ಹೊರತಾದ, ಹೆಚ್ಚಿನ ರಿಸ್ಕ್ ಹೊಂದಿರುವ ಹೊಸ ಸ್ಟಾರ್ಟ್‌ಅಪ್ ಆಲೋಚನೆಗಳು ಮತ್ತು ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರೆ. ಫೆಬ್ರವರಿ 1, 2026 ರಿಂದ ಈ ಬದಲಾವಣೆ ಜಾರಿಗೆ ಬರಲಿದೆ.➤ ಅಲ್ಬಿಂದರ್ ಧಿಲ್ಲೋನ್: ಇವರು ಐಐಟಿ ದೆಹಲಿ (IIT Delhi) ಪದವೀಧರ ಮತ್ತು ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ (MBA) ಪದವಿ ಪಡೆದಿದ್ದಾರೆ. ಈ ಹಿಂದೆ ಜೊಮ್ಯಾಟೊದಲ್ಲಿ ಅಂತರಾಷ್ಟ್ರೀಯ ವಿಸ್ತರಣಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ನಂತರ ಕ್ವಿಕ್-ಕಾಮರ್ಸ್ ಸಂಸ್ಥೆಯಾದ 'ಗ್ರೋಫರ್ಸ್' (Grofers) ಸ್ಥಾಪಿಸಿದರು, ಇದನ್ನು ಮುಂದೆ 'ಬ್ಲಿಂಕಿಟ್' (Blinkit) ಎಂದು ಮರುನಾಮಕರಣ ಮಾಡಲಾಯಿತು.- 2022ರಲ್ಲಿ ಜೊಮ್ಯಾಟೊ ಸಂಸ್ಥೆಯು ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.➤ ಎಟರ್ನಲ್ ಗ್ರೂಪ್ (Eternal Group): ಜೊಮ್ಯಾಟೊ ತನ್ನ ಹೆಸರನ್ನು 'ಎಟರ್ನಲ್ ಲಿಮಿಟೆಡ್' ಎಂದು ಬದಲಿಸಿಕೊಂಡಿದ್ದು, ಇದು ಆಹಾರ ವಿತರಣೆ (Zomato), ಕ್ವಿಕ್ ಕಾಮರ್ಸ್ (Blinkit), ಹೈಪರ್‌ಪ್ಯೂರ್ ಮತ್ತು ಮನರಂಜನಾ ವ್ಯವಹಾರಗಳನ್ನು ಒಳಗೊಂಡಿರುವ ಬೃಹತ್ ಸಂಸ್ಥೆಯಾಗಿದೆ.➤ ಅಲ್ಬಿಂದರ್ ಧಿಲ್ಲೋನ್ ಅವರು ಕಂಪನಿಯ ದೈನಂದಿನ ಕಾರ್ಯಾಚರಣೆ, ಕಾರ್ಯತಂತ್ರ ಮತ್ತು ವ್ಯವಹಾರದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ದೀಪಿಂದರ್ ಗೋಯಲ್ ಅವರು ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದ್ದಾರೆ.