* ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಎರಡನೇ ಸ್ಥಾನ. ಉತ್ತರ ಪ್ರದೇಶ ಮೂರನೇ ಸ್ಥಾನ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ರಾಜ್ಯದಲ್ಲಿ 5,765 ಪಿಇವಿಸಿಎಸ್‌ಗಳಿದ್ದು, ಅದರಲ್ಲಿ 4,462 ಬೆಂಗಳೂರು ನಗರವೊಂದರಲ್ಲೇ ಇವೆ.* ವರದಿಗಳ ಪ್ರಕಾರ ಮಹಾರಾಷ್ಟ್ರ 3,728, ಉತ್ತ ಪ್ರದೇಶ 1,989 ಮತ್ತು ದೆಹಲಿ 1,941 ಚಾರ್ಜಿಂಗ್ ಪಾಯಿಂಟ್‌ ಹೊಂದಿದ್ದು, ಕರ್ನಾಟಕದ ನಂತರದ ಸ್ಥಾನದಲ್ಲಿವೆ. ಉಳಿದಂತೆ ತಮಿಳುನಾಡು 1,413, ಕೇರಳ 1,212, ರಾಜಸ್ಥಾನ 1,129, ಗುಜರಾತ್ 992 ಪಾಯಿಂಟ್‌ಗಳಿವೆ.* ಈ ವರ್ಷದ ಮೇ ತಿಂಗಳಿನಲ್ಲಿ ಟಾಟಾ ಪವರ್ ತನ್ನ ಇವಿ ಚಾರ್ಜಿಂಗ್ ನೆಟ್‌ವರ್ಕ್‌ ಅಡಿಯಲ್ಲಿ ಕರ್ನಾಟಕದಲ್ಲಿ 220 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಿತ್ತು. ಮಂಗಳೂರು, ದಾವಣಗೆರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ, ಹಲವು ಪ್ರವಾಸಿ ತಾಣಗಳಲ್ಲಿಯೂ ಚಾರ್ಜಿಂಗ್ ಪಾಯಿಂಟ್ ಆರಂಭಿಸಿ ಎಲೆಕ್ಟ್ರಿಕ್ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿತ್ತು.* ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ ಫೆಬ್ರವರಿಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.* ರಾಜ್ಯ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 35 ಕೋಟಿ ರೂ. ಹೂಡಿಕೆ ಮಾಡಲಿದೆ. ಆದರೆ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಕಂಪನಿಗಳು ಶೋ ರೂಂಗಳನ್ನು ತೆರಯುತ್ತಿವೆ.