* ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿನುತನ ಪ್ರಯತ್ನವಾಗಿ ಬೆಂಗಳೂರು ನಗರದ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ಆಹಾರ ಪದಾರ್ಥಗಳ ತ್ವರಿತ ಪರೀಕ್ಷೆಗಾಗಿ ಪ್ರಾಯೋಗಿಕವಾಗಿ ನಿರ್ಮಿಸಿರುವ ‘ಮ್ಯಾಜಿಕ್ ಬಾಕ್ಸ್’ ಆಹಾರ ಪರೀಕ್ಷಾ ಕೇಂದ್ರವನ್ನು ಅವರು ಅಕ್ಟೋಬರ್ 25 ರಂದು ಉದ್ಘಾಟಿಸಿದರು.* ಮಾರುಕಟ್ಟೆಯಲ್ಲಿ ಖರೀದಿಸುವ ವಿವಿಧ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅಳವಡಿಸಿಕೊಳ್ಳಲು ಮ್ಯಾಜಿಕ್ ಬಾಕ್ಸ್ ಆಹಾರ ಪರೀಕ್ಷಾ ಕಿಯಾಸ್ಕ್ ಗಳು ಸಹಕಾರಿಯಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.* ಮನೆಯಲ್ಲಿ ಅಡುಗೆ ಮಾಡುವಾಗ ನಾವು ಎಚ್ಚರಿಕೆವಹಿಸಿ ನೈಸರ್ಗಿಕ ಹಾಗೂ ಒಳ್ಳೆಯ ಗುಣಮಟ್ಟದ ಕಲಬೆರಕೆ ಇಲ್ಲದ ಉತ್ತಮ ಆಹಾರ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಹೊರಗೆ ತಿನ್ನುವ ಆಹಾರಗಳಲ್ಲಿ ನೋಡಲು ಆಕರ್ಷಕವಾಗಿರುವಂತೆ ರಾಸಾಯನಿಕ ಬಣ್ಣಗಳನ್ನು ಮತ್ತು ರುಚಿಯನ್ನು ಹೆಚ್ಚಿಸುವ ಟೇಸ್ಟ್ ಮೇಕರ್ ಗಳನ್ನು ಬಳಸಲಾಗುತ್ತದೆ. * ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬದಲಾದ ಜೀವನಶೈಲಿ, ಆಹಾರ ಪದ್ಧತಿಗಳು ಮತ್ತು ಮಲಿನಗೊಂಡ ಪರಿಸರದಲ್ಲಿ ಬದುಕುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದಯಘಾತ ಮತ್ತು ಮಾರಕ ಕ್ಯಾನ್ಸರ್ ಗಳಿಗೆ ತುತ್ತಾಗುತ್ತಿದ್ದಾರೆ. * ಇಲಾಖೆಯ ಆಯುಕ್ತರಾದ ಕೆ ಶ್ರೀನಿವಾಸ್ ಅವರು ಬೆಂಗಳೂರು ನಗರಾದ್ಯಂತ ಒಟ್ಟು 10 ಮಾಲ್ ಗಳಲ್ಲಿ ಈ ಆಹಾರ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. * ತುಮಕೂರು ರಸ್ತೆಯ ವೈಷ್ಣವಿ ಸಫಾಯರ್ ಮಾಲ್, ಥಣಿಸಂದ್ರದ ಎಲಿಮೆಂಟ್ಸ್ ಮಾಲ್, ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್, ಚರ್ಚ್ ಸ್ಟ್ರೀಟ್ ಒನ್ ಶೋಭಾ ಮಾಲ್, ಬೆಳ್ಳಂದೂರಿನಲ್ಲಿರುವ ಸೆಂಟ್ರಲ್ ಮಾಲ್, ಬೆನ್ನಿಗಾನಹಳ್ಳಿಯಲ್ಲಿರುವ ಗೋಪಾಲನ್ ಸಿಗ್ನೇಚರ್ ಮಾಲ್, ಕೋರಮಂಗಲದಲ್ಲಿರುವ ನೆಕ್ಸಸ್ ಫೋರಮ್ ಮಾಲ್, ಥಣಿಸಂದ್ರ ದಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿ ಟಿ ವರ್ಲ್ಡ್ ಮಾಲ್ ಗಳಲ್ಲಿ ಈ ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.* ಈ ಕೇಂದ್ರಗಳಲ್ಲಿ ಸಾರ್ವಜನಿಕರು ಪ್ರತಿದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ, ಟೀ ಪುಡಿ, ಉಪ್ಪು, ಹಾಲು, ತುಪ್ಪ, ಪನೀರ್, ಬೆಣ್ಣೆ, ತರಕಾರಿಗಳು, ಧನ್ಯ ಪುಡಿ, ಕುಡಿಯುವ ನೀರು ಸೇರಿದಂತೆ ಇತರೆ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.