Job Description: ಬೆಂಗಳೂರು: ಗಗನಯಾನಕ್ಕೆ ಇಸ್ರೊ ತಯಾರಿ ನಡೆಸಿರುವಂತೆಯೇ, ಗಗನಯಾತ್ರಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪ್ಯಾರಾಚೂಟ್ ತಯಾರಿಸುವ ಕಾರ್ಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆರಂಭಿಸಿದೆ. ಒಟ್ಟು ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಇದ್ದು, ಬಹುತೇಕ 2022ರ ವೇಳೆಗೆ ಇದು ಕಾರ್ಯಗತವಾಗಲಿದೆ. ಅದಕ್ಕೆ ಮೊದಲು, ಅಂದರೆ ಇನ್ನೊಂದು ವರ್ಷದಲ್ಲಿ ಎಲ್ಲಾ ಪರೀಕ್ಷೆಗಳನ್ನೂ ನಡೆಸಿ, ಬಳಕೆಗೆ ಸಿದ್ಧವಾದ ಪ್ಯಾರಾಚೂಟ್‌ಗಳನ್ನು ಡಿಆರ್‌ಡಿಒ ಇಸ್ರೊಗೆ ಹಸ್ತಾಂತರಿಸಲಿದೆ. ಗಗನಯಾನ ಸಂದರ್ಭದಲ್ಲಿ ಅತ್ಯಂತ ಬಿಸಿ ಹಾಗೂ ಅತ್ಯಂತ ಚಳಿ ಸಂದರ್ಭಗಳನ್ನು ಗಗನಯಾತ್ರಿಗಳು ಎದುರಿಸಬೇಕಾಗುತ್ತದೆ. ಗಗನಯಾತ್ರಿಗಳ ಮಾಡ್ಯೂಲ್‌ಗಳ ಜತೆಯಲ್ಲಿ ಪ್ಯಾರಾಚೂಟ್ ಸಹ ಇರುತ್ತದೆ. ಯಾವ ಹಂತದಲ್ಲಿ ಪ್ಯಾರಾಚೂಟ್ ತೆರೆದುಕೊಳ್ಳಬೇಕು, ಸಮುದ್ರದಲ್ಲಿ ಇಳಿಯುವುದಾದರೆ ಎಷ್ಟು ಆಳಕ್ಕೆ ಹೋಗಿ ಅದು ಗಗನಯಾತ್ರಿಯನ್ನು ರಕ್ಷಿಸಬೇಕು ಮೊದಲಾದ ಪರೀಕ್ಷೆಗಳನ್ನು ನಡೆಸಿದ ಬಳಿಕವಷ್ಟೇ ಪ್ಯಾರಾಚೂಟ್ ಸಿದ್ಧವಾಗುತ್ತದೆ.