Job Description: ದ್ವಿದಳ ಧಾನ್ಯಗಳ ಇಳುವರಿಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿ ಇರುವ ಕರ್ನಾಟಕವು 2018-19ನೇ ಸಾಲಿನ ಕೇಂದ್ರ ಸರ್ಕಾರದ ಕೃಷಿ ಕರ್ಮಣ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯವು ಎರಡನೇ ಬಾರಿಗೆ ಭಾಜನವಾಗಿದೆ. 2010-11ನೇ ಸಾಲಿನಲ್ಲಿ ಸಿರಿಧಾನ್ಯಗಳ ಇಳುವರಿಗಾಗಿ ಈ ಪ್ರಶಸ್ತಿ ರಾಜ್ಯಕ್ಕೆ ಸಂದಿತ್ತು. ಸಚಿವಾಲಯದ ತಜ್ಞರ ತಂಡ ನಡೆಸಿದ ಸಮೀಕ್ಷೆಯಲ್ಲಿ ಬೆಳೆ ಇಳುವರಿ, ಉತ್ಪಾದನೆ ಹೆಚ್ಚಳಕ್ಕಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನ, ಕೃಷಿ ಉತ್ತೇಜನಕ್ಕೆ ಅಳವಡಿಸಿಕೊಂಡ ಸುಧಾರಿತ ಉಪಕ್ರಮಗಳನ್ನು ಪರಿಗಣಿಸಲಾಗಿದೆ. 'ಕರ್ನಾಟಕವು ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅವರೆ, ಅಲಸಂದೆ ಕಾಳುಗಳನ್ನು ಹೆಚ್ಚಾಗಿ ಉತ್ಪಾದಿಸುತ್ತ ದೇಶದ ಜನರ ಆಹಾರ ಭದ್ರತೆಗೆ ಕೊಡುಗೆ ನೀಡುತ್ತಿದೆ' ಎಂದು ತಂಡವು ಸದಾಭಿಪ್ರಾಯ ವ್ಯಕ್ತಪಡಿಸಿದೆ. ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ: ತುಮಕೂರಿನಲ್ಲಿ ಜ.2ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯು ₹1 ಕೋಟಿ ಮತ್ತು ಪಾರಿತೋಷಕ ಒಳಗೊಂಡಿದೆ.