* ದೇಶದಲ್ಲಿ ಕುಸಿಯುತ್ತಿರುವ ಯುವಕರ ಜನಸಂಖ್ಯೆಯನ್ನು ಹೆಚ್ಚಳ ಮಾಡುವುದಕ್ಕಾಗಿ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗಳಿಗೆ ತೆರಿಗೆ ಕಡಿತ, ಸಹಾಯಧನ ನೀಡುವ ಯೋಜನೆಯನ್ನು ಚೀನಾ ಘೋಷಣೆ ಮಾಡಿದೆ.* ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ 13 ಕ್ರಮಗಳನ್ನು ಜಾರಿ ಮಾಡಿರುವ ಚೀನಾ, ಈ ಮೊದಲೇ ಮಕ್ಕಳ ಆರೈಕೆ ಕೇಂದ್ರಗಳ ಅಭಿವೃದ್ಧಿ, ಶಿಕ್ಷಣ ಗುಣಮಟ್ಟ ಹೆಚ್ಚಳ, ಮನೆ ಹಾಗೂ ಉದ್ಯೋಗ ಕೊಡುವುದಾಗಿಯೂ ಘೋಷಿಸಿತ್ತು.* ಚೀನಾದಲ್ಲಿ ಸತತ 3ನೇ ವರ್ಷವೂ ಜನಸಂಖ್ಯೆ ಕುಸಿತದ ಹಾದಿಯಲ್ಲಿದ್ದು, 2023ರೊಂದರಲ್ಲೇ 14,808 ಶಿಶುವಿಹಾರಗಳು, 5,645 ಪ್ರಾಥಮಿಕ ಶಾಲೆಗಳು ಮುಚ್ಚಿದ್ದವು. ಹೀಗಾಗಿ ಚೀನಾ ಮಕ್ಕಳ ಜನನ ಪ್ರಮಾಣ ಏರಿಕೆ ಮಾಡುವ ಕ್ರಮಕ್ಕೆ ಮುಂದಾಗಿದೆ. ಚೀನಾದ ಗಂಭೀರ ಜನಸಂಖ್ಯಾ ಬಿಕ್ಕಟ್ಟಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಅನುಸರಿಸುತ್ತಿರುವ ದಶಕಗಳಷ್ಟು ಹಳೆಯದಾದ 'ಒಂದು ಮಗು' ನೀತಿಯೇ ಕಾರಣವೆಂದು ದೂಷಿಸಲಾಗಿದೆ. 2021ರಲ್ಲಿ ಜನಸಂಖ್ಯಾ ನೀತಿ ಪರಿಷ್ಕರಿಸಿರುವ ಚೀನಾ ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿದೆ.