Job Description: ➤ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ಏಕತೆ ಮತ್ತು ಪ್ರಗತಿ ಉತ್ತೇಜನ ಕಾಯಿದೆ’ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ದೇಶದ ಭದ್ರತೆ ಮತ್ತು ಜನಾಂಗೀಯ ಸಾಮರಸ್ಯಕ್ಕಾಗಿ ಈ ಕಾನೂನು ತರಲಾಗಿದೆ ಎಂದು ಚೀನಾ ಹೇಳಿಕೊಂಡಿದ್ದರೂ, ವಿಶ್ವಸಂಸ್ಥೆ (UN) ಮತ್ತು ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ➤ ಹೊಸ ಕಾನೂನು: ಚೀನಾದಲ್ಲಿರುವ 56 ಜನಾಂಗೀಯ ಸಮೂಹಗಳಲ್ಲಿ ‘ಒಂದೇ ರಾಷ್ಟ್ರೀಯ ಗುರುತು’ ಮೂಡಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಚೀನಾದಲ್ಲಿ ಶೇ. 90ಕ್ಕಿಂತ ಹೆಚ್ಚು ಜನ ‘ಹಾನ್’ (Han) ಜನಾಂಗಕ್ಕೆ ಸೇರಿದವರಾಗಿದ್ದು, ಉಯ್ಘರ್, ಟಿಬೆಟಿಯನ್ ಮತ್ತು ಮಂಗೋಲ್ ಮುಂತಾದವರು ಅಲ್ಪಸಂಖ್ಯಾತರಾಗಿದ್ದಾರೆ. ಇನ್ನು ಮುಂದೆ ಶಿಕ್ಷಣ, ಆಡಳಿತ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ‘ರಾಷ್ಟ್ರೀಯ ಏಕತೆ’ ಪಾಲಿಸುವುದು ಕಡ್ಡಾಯವಾಗಿದೆ.➤ ಕಾಯಿದೆಯ ಪ್ರಮುಖ ನಿಯಮಗಳು: ಕಡ್ಡಾಯ ಮ್ಯಾಂಡರಿನ್ ಭಾಷೆ: ಶಾಲೆ ಮತ್ತು ಸರಕಾರಿ ಕಚೇರಿಗಳಲ್ಲಿ ಚೀನಾದ ಅಧಿಕೃತ ಭಾಷೆಯಾದ 'ಮ್ಯಾಂಡರಿನ್' ಕಡ್ಡಾಯ. ಕಮ್ಯುನಿಸ್ಟ್ ಪಕ್ಷಕ್ಕೆ ಬೆಂಬಲ: ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಚೀನಾ ದೇಶ ಮತ್ತು ಅಲ್ಲಿನ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ಶಿಕ್ಷಣ ನೀಡಬೇಕು. ಸಾಂಸ್ಕೃತಿಕ ನಿಯಂತ್ರಣ: ಗ್ರಂಥಾಲಯ ಹಾಗೂ ಮ್ಯೂಸಿಯಂಗಳು ಕೇವಲ ಚೀನಾದ ಇತಿಹಾಸ ಮತ್ತು ಏಕತೆಯನ್ನು ಮಾತ್ರ ಬಿಂಬಿಸಬೇಕು. ಕಠಿಣ ಕ್ರಮ: ಪ್ರತ್ಯೇಕತಾವಾದ ಅಥವಾ ದೇಶದ ಏಕತೆಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ. ➤ ವಿಶ್ವಸಂಸ್ಥೆಯ ಆಕ್ಷೇಪ: ಈ ಕಾಯಿದೆಯು ಅಲ್ಪಸಂಖ್ಯಾತರು (ವಿಶೇಷವಾಗಿ ಜಿಂಜಿಯಾಂಗ್ ಮತ್ತು ಟಿಬೆಟ್ ಪ್ರಾಂತ್ಯದವರು) ತಮ್ಮ ಸ್ವಂತ ಸಂಸ್ಕೃತಿ-ಧರ್ಮವನ್ನು ಮರೆತು ಚೀನಿ ಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಕಾಯಿದೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಆಗ್ರಹಿಸಿದ್ದಾರೆ.➤ ವಿದೇಶಗಳಿಗೂ ಅನ್ವಯ: ಚೀನಾದ ಹೊರಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಚೀನಾದ ಏಕತೆಗೆ ಧಕ್ಕೆ ತರುವಂತೆ ಮಾತನಾಡಿದರೆ ಅವರನ್ನೂ ಈ ಕಾಯಿದೆ ಅಡಿ ಅಪರಾಧಿ ಎನ್ನಲಾಗುತ್ತದೆ. ಇದು ಚೀನಾಕ್ಕೆ ಪ್ರಯಾಣಿಸುವ ವಿದೇಶಿ ಪ್ರಜೆಗಳನ್ನು ಹೆದರಿಸಲು ಬಳಸುವ ಅಸ್ತ್ರ ಎಂದು ತೈವಾನ್ ಆತಂಕ ವ್ಯಕ್ತಪಡಿಸಿದೆ.ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ