Job Description: ➤ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಜೂನ್ 9 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕಾದ ದಿನ. ಕೇವಲ 24 ವರ್ಷದ ಪ್ರಾಯದಲ್ಲೇ ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿದ ಅಪ್ರತಿಮ ಬುಡಕಟ್ಟು ವೀರ, ಜಾನಪದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರು ರಾಂಚಿಯ ಜೈಲಿನಲ್ಲಿ ಹುತಾತ್ಮರಾದ ದಿನವಿದು. ಶೋಷಿತರ, ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಮಹಾನ್ ಚೇತನವನ್ನು ಅವರ ಸಮುದಾಯದ ಜನ ಪ್ರೀತಿಯಿಂದ 'ಧರತಿ ಅಬಾ' (ಜಗದ ತಂದೆ) ಎಂದೇ ಪೂಜಿಸುತ್ತಾರೆ.➤ ಬಾಲ್ಯ ಮತ್ತು ಧಾರ್ಮಿಕ ಸುಧಾರಣೆ (Birsait Faith): ಬಿರ್ಸಾ ಮುಂಡಾ ಅವರು ನವೆಂಬರ್ 15, 1875 ರಂದು ಇಂದಿನ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಉಲಿಹತು ಗ್ರಾಮದಲ್ಲಿ ಜನಿಸಿದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿ ಬುಡಕಟ್ಟು ಜನರ ಜಮೀನುಗಳನ್ನು ಕಬಳಿಸುವ ಪ್ರಕ್ರಿಯೆ ತೀವ್ರವಾಗಿದ್ದ ಕಾಲವದು. ಆರಂಭದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದ ಬಿರ್ಸಾ ಮುಂಡಾ, ನಂತರ ಬ್ರಿಟಿಷರ ಸಾಂಸ್ಕೃತಿಕ ನಾಶದ ಕುತಂತ್ರವನ್ನು ಅರಿತು ಮಿಷನರಿ ತೊರೆದು, ಮೂಢನಂಬಿಕೆ ಹಾಗೂ ಮದ್ಯಪಾನ ಮುಕ್ತ ಸಮಾಜಕ್ಕಾಗಿ 'ಬಿರ್ಸಾಯಿತ್' ಎಂಬ ಹೊಸ ಧರ್ಮವನ್ನು ಸ್ಥಾಪಿಸಿ ಇಡೀ ಮುಂಡಾ ಬುಡಕಟ್ಟು ಸಮುದಾಯವನ್ನು ಸಂಘಟಿಸಿದರು.➤ ಇತಿಹಾಸ ಪ್ರಸಿದ್ಧ 'ಉಲ್ಗುಲಾನ್' ಮಹಾ ದಂಗೆ:19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷರು ಸಾಂಪ್ರದಾಯಿಕ ಜಂಟಿ ಭೂಹಿಡುವಳಿ ಪದ್ಧತಿಯಾದ 'ಖುಂಟ್‌ಕಟ್ಟಿ' (Khuntkatti System) ವ್ಯವಸ್ಥೆಯನ್ನು ರದ್ದುಗೊಳಿಸಿ, ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದರು. ಇದರಿಂದಾಗಿ ಕಾಡಿನ ಮಕ್ಕಳಾದ ಬುಡಕಟ್ಟು ಜನರು ತಮ್ಮದೇ ಭೂಮಿಯಲ್ಲಿ ಜೀತದಾಳುಗಳಾಗಬೇಕಾಯಿತು. ಹೊರಗಿನಿಂದ ಬಂದು ಶೋಷಣೆ ಮಾಡುತ್ತಿದ್ದ ಲೇವಾದೇವಿಗಾರರು ಮತ್ತು ಬ್ರಿಟಿಷರನ್ನು ಬಿರ್ಸಾ ಮುಂಡಾ 'ದಿಕುಗಳು' (Dikus - ಹೊರಗಿನವರು) ಎಂದು ಕರೆದರು.ಈ ಶೋಷಣೆಯ ವಿರುದ್ಧ 1899-1900ರ ಅವಧಿಯಲ್ಲಿ ಬಿರ್ಸಾ ಮುಂಡಾ ಹೂಡಿದ ರಣಕಹಳೆಯೇ ಇತಿಹಾಸ ಪ್ರಸಿದ್ಧ 'ಉಲ್ಕುಲಾನ್' (Ulgulan - ಮಹಾ ದಂಗೆ).➤ ಬಿರ್ಸಾ ಮುಂಡಾ ಅವರ ಐತಿಹಾಸಿಕ ಘೋಷಣೆ: "ಅಬುಆ ರಾಜ್ ಸೆಟರ್ ಜಾನಾ, ಮಹಾರಾಣಿ ರಾಜ್ ತುಂಡು ಜಾನಾ" (ಅಂದರೆ: "ರಾಣಿಯ ಆಡಳಿತ ಕೊನೆಗೊಳ್ಳಲಿ, ನಮ್ಮದೇ ಸ್ವಯಂ ಆಡಳಿತ ಸ್ಥಾಪನೆಯಾಗಲಿ").➤ ಚಿಕ್ಕ ವಯಸ್ಸಿನಲ್ಲೇ ಬಲಿದಾನ ಮತ್ತು ಅಮರ ಪರಂಪರೆ: ಬಿರ್ಸಾ ಮುಂಡಾ ಅವರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗದ ಬ್ರಿಟಿಷ್ ಸರ್ಕಾರ, ಅಂತಿಮವಾಗಿ ಮಾರ್ಚ್ 1900 ರಲ್ಲಿ ಜಮ್‌ಕೋಪೈ ಅರಣ್ಯದಲ್ಲಿ ಅವರು ಮಲಗಿದ್ದಾಗ ಉಪಾಯದಿಂದ ಬಂಧಿಸಿತು. ರಾಂಚಿಯ ಕಾರಾಗೃಹದ ಕತ್ತಲಕೋಣೆಯಲ್ಲಿ ಇಡಲ್ಪಟ್ಟ ಈ 24 ವರ್ಷದ ಯುವ ನಾಯಕ, ಜೂನ್ 9, 1900 ರಂದು ರಹಸ್ಯ ಸಂದರ್ಭದಲ್ಲಿ (ಬ್ರಿಟಿಷರ ಪ್ರಕಾರ ಕಾಲರಾ ರೋಗದಿಂದ, ಆದರೆ ವಿಷ ಉಣಿಸಿ ಕಲ್ಲಲಾಯಿತು ಎಂಬ ಬಲವಾದ ಶಂಕೆಯಿದೆ) ಕೊನೆಯುಸಿರೆಳೆದರು.➤ ಅವರು ಹಚ್ಚಿದ ಕ್ರಾಂತಿಯ ಜ್ವಾಲೆ ಎಷ್ಟಿತ್ತೆಂದರೆ, ಅವರ ಮರಣದ ನಂತರ ಬ್ರಿಟಿಷ್ ಸರ್ಕಾರವು ಬುಡಕಟ್ಟು ಜನರ ಭೂಮಿಯನ್ನು ರಕ್ಷಿಸಲು 1908ರ ಛೋಟಾನಾಗ್‌ಪುರ್ ಗೇಣಿ ಕಾಯ್ದೆ (Chhotanagpur Tenancy Act - CNT) ಜಾರಿಗೆ ತರಲೇಬೇಕಾಯಿತು. ಈ ಕಾಯ್ದೆಯು ಬುಡಕಟ್ಟು ಜಮೀನನ್ನು ಆ ಕಮ್ಯುನಿಟಿಯಲ್ಲದ ಹೊರಗಿನವರಿಗೆ ವರ್ಗಾವಣೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿತು.➤ ಬುಡಕಟ್ಟು ಜನರ ಹಕ್ಕುಗಳ ಹೋರಾಟಕ್ಕೆ ದಾರಿದೀಪವಾದ ಬಿರ್ಸಾ ಮುಂಡಾ ಅವರ ನೆನಪಿನಲ್ಲಿ, ಭಾರತ ಸರ್ಕಾರವು ಅವರ ಜನ್ಮದಿನವಾದ ನವೆಂಬರ್ 15 ಅನ್ನು ದೇಶಾದ್ಯಂತ 'ಜನಜಾತೀಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ) ಎಂದು ಆಚರಿಸುತ್ತಿದೆ.