➤ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬಿಹಾರ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟವು ಸಾರನ್ ಜಿಲ್ಲೆಯ ಸೋನ್ಪುರದಲ್ಲಿ ನೂತನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Sonepur Greenfield Airport) ನಿರ್ಮಾಣಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಸುಮಾರು 4,200 ಎಕರೆ ವಿಸ್ತೀರ್ಣದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ₹1,302 ಕೋಟಿ ಭೂಸ್ವಾಧೀನ ವೆಚ್ಚದೊಂದಿಗೆ 2030ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.➤ ಸೋನಪುರ ವಿಮಾನ ನಿಲ್ದಾಣವು ಪೂರ್ಣಗೊಂಡ ನಂತರ ವಿಸ್ತೀರ್ಣ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಭಾರತದ 5ನೇ ಅತಿದೊಡ್ಡ ನಿಲ್ದಾಣವಾಗಲಿದೆ. ಪ್ರಸ್ತುತ ಅಗ್ರಸ್ಥಾನದಲ್ಲಿರುವ ನಿಲ್ದಾಣಗಳೆಂದರೆ:1.ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ದೆಹಲಿ)2.ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಹೈದರಾಬಾದ್)3.ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಮಹಾರಾಷ್ಟ್ರ - ನಿರ್ಮಾಣ ಹಂತದಲ್ಲಿದೆ)4.ನೋಯ್ಡಾ (ಜೇವರ್) ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಉತ್ತರ ಪ್ರದೇಶ - ನಿರ್ಮಾಣ ಹಂತದಲ್ಲಿದೆ)5.ಸೋನ್ಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ (ಬಿಹಾರ)➤ ಈ ವಿಮಾನ ನಿಲ್ದಾಣದ ಪ್ರಮುಖ ಆಕರ್ಷಣೆಯೆಂದರೆ ಅದರ ರನ್‌ವೇಗಳು. ಇಲ್ಲಿ ತಲಾ 4,200 ಮೀಟರ್ ಉದ್ದದ ಎರಡು ರನ್‌ವೇಗಳನ್ನು ನಿರ್ಮಿಸಲಾಗುವುದು. ಇಷ್ಟು ಉದ್ದದ ರನ್‌ವೇ ಇರುವುದರಿಂದ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನವಾದ  ಏರ್‌ಬಸ್ A380 (Airbus A380) ಇಲ್ಲಿ ಸುಲಭವಾಗಿ ಇಳಿಯಬಹುದು.➤ ಮೊದಲಿನಿಂದಲೂ ಹೊಸದಾಗಿ, ಯಾವುದೇ ಹಳೆಯ ಮೂಲಸೌಕರ್ಯಗಳಿಲ್ಲದ ಜಾಗದಲ್ಲಿ ನಿರ್ಮಿಸುವ ಯೋಜನೆಯನ್ನು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಎನ್ನುವರು. ಈಗಾಗಲೇ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವನ್ನು ವಿಸ್ತರಿಸುವುದು ಅಥವಾ ನವೀಕರಿಸುವುದಕ್ಕೆ ಬ್ರೌನ್‌ಫೀಲ್ಡ್ (Brownfield) ಎನ್ನುವರು. ಸೋನ್ಪುರವು ಭಾರತದ 24ನೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಲಿದೆ.