* 'ಸಿಟಿ ವಿಥ್ ಬೆಸ್ಟ್ ರೆಕಾರ್ಡ್ ಆಫ್ ಪಬ್ಲಿಕ್ ಇನ್ವಾಲ್ವ್ಮೆಂಟ್ ಇನ್ ಟ್ರಾನ್ಸ್ಪೋರ್ಟ್' ವಿಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 'ಅವಾರ್ಡ್ ಆಫ್ ಎಕ್ಸೆಲೆನ್ಸ್ ಇನ್ ಅರ್ಬನ್ ಟ್ರಾನ್ಸ್ಪೋರ್ಟ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.* ಭಾನುವಾರ(ಅ.27) ಗುಜರಾತ್ನ ಗಾಂಧಿನಗರದಲ್ಲಿ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.* ಭಾರತ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಮೀಸಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದೇಶದ ಇತರೆ ನಗರ ಸಾರಿಗೆ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳೊಂದಿಗೆ ಸ್ಪರ್ಧಿಸಿ ಈ ಪುರಸ್ಕಾರವನ್ನು ಪಡೆದಿದೆ.* ನಗರದೊಳಗೆ ಪ್ರಯಾಣಿಸಲು ನಾಗರಿಕರಿಗೆ ಸುರಕ್ಷಿತ, ಪರಿಸರ ಸ್ನೇಹಿ ಮಾರ್ಗವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದ್ದು ಹೆಚ್ಎಸ್ಆರ್ ಬಡಾವಣೆಯ ನಾಗರಿಕರಿಗೆ ವಿನೂತನ ಮಾದರಿಯ ಬಡಾವಣೆ ಒಳಗಿನ ಸೇವೆಯಿಂದ ಸಾರ್ವಜನಿಕ ಮನ್ನಣೆ ಪಡೆದಿದೆ. ರಾಷ್ಟ್ರದಾದ್ಯಂತ ಈ ಮಾದರಿಯ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಹೇಳಿದ್ದಾರೆ.