* ಅಳಿವಿನಂಚಿನಲ್ಲಿರುವ ಕತ್ತೆಕಿರುಬಗಳನ್ನು ರಕ್ಷಿಸಲು ಬೆಳಗಾವಿ ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಕತ್ತೆಕಿರುಬಗಳು ಬೆಳಗಾವಿ ಜಿಲ್ಲೆಯಲ್ಲಿ ಇವೆ. ಹೀಗಾಗಿ ಬೆಳಗಾವಿಯನ್ನು ಕತ್ತೆಕಿರುಬ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಅರಣ್ಯ ಇಲಾಖೆ ಸಿದ್ದತೆ ನಡೆಸಿದೆ.* ಬೆಳಗಾವಿ ಕರ್ನಾಟಕದ ಮೊಟ್ಟ ಮೊದಲ “ಕತ್ತೆಕಿರುಬ ಸಂರಕ್ಷಿತ ಪ್ರದೇಶ” (Hyena Sanctuary) ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.* ಈ ಅಭಯಾರಣ್ಯಗಳಲ್ಲಿ ಕತ್ತೆಕಿರುಬಗಳ ಜೊತೆಗೆ ತೋಳ, ಕೃಷ್ಣಮೃಗಗಳನ್ನು ಕೂಡ ಸಂರಕ್ಷಿಸಲಾಗುತ್ತಿದೆ. ಬೆಳಗಾವಿ ಮತ್ತು ಗೋಕಾಕ ತಾಲೂಕುಗಳ ಗಡಿಯಲ್ಲಿರುವ ಸುಮಾರು 120 ಚ.ಕಿ.ಮೀ ಮೀಸಲು ಅರಣ್ಯವನ್ನು ಹೈನಾ ಅಭಯಾರಣ್ಯವನ್ನಾಗಿ ಘೋಷಿಸಲು ಬೆಳಗಾವಿಯ ಅರಣ್ಯಾಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದಾರೆ.* ಸವದತ್ತಿ, ಗೋಕಾಕ್, ಹುಕ್ಕೇರಿ ಮತ್ತು ಬೆಳಗಾವಿಯ ಎಲೆ ಉದುರುವ ಅರಣ್ಯ ಪ್ರದೇಶಗಳು ಕತ್ತೆಕಿರುಬಗಳ ಆವಾಸ ಸ್ಥಾನಗಳಾಗಿವೆ.* ಕತ್ತೆಕಿರುಬಗಳು ಕಾಡುಗಳು ಮತ್ತು ಹುಲ್ಲುಗಾವಲುಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ. ಬಾಗಲಕೋಟೆ, ಬೀದರ್, ಧಾರವಾಡ, ಕೊಪ್ಪಳ, ತುಮಕೂರು, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕತ್ತೆಕಿರುಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಘಾತಕಾರಿಯಾಗಿದೆ.* ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜಾ ಡಿ ಮಾತನಾಡಿ, ಕತ್ತೆಕಿರುಬಗಳನ್ನು ಸಂರಕ್ಷಿಸಲು ಬೆಳಗಾವಿ ಉತ್ತಮ ಜಿಲ್ಲೆಯಾಗಿದೆ. 2021 ರಲ್ಲಿ ಕೊಪ್ಪಳದ ಗಂಗಾವತಿ, ತಾವರಗೇರಾ, ಯಲಬುರ್ಗಾ ಮತ್ತು ಸುತ್ತಮುತ್ತಲಿನ ಒಣ ಹುಲ್ಲುಗಾವಲು ಪ್ರದೇಶಗಳನ್ನು ಕತ್ತೆಕಿರುಬ ಸಂರಕ್ಷಣಾ ಪ್ರದೇಶವೆಂದು ಘೋಷಿಸಲು ಪ್ರಯತ್ನವನ್ನು ಮಾಡಲಾಯಿತು. ಆದರೆ, ಸಾಧ್ಯವಾಗಲಿಲ್ಲ ಎಂದರು.