* ಕೋಟ್ಯಂತರ ಮಂದಿ ಆಸ್ತಿಕರು ವರ್ಷಗಳಿಂದ ಕಾಯುತ್ತಿದ್ದ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಮುಖ್ಯ ಯಜಮಾನನ ಸ್ಥಾನದಲ್ಲಿ ನಿಂತು ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿ ಸೋಮವಾರ (ಜ.22) ನೆರವೇರಿಸಿದರು.* ದೇಶ ಹಾಗೂ ವಿದೇಶಗಳಲ್ಲಿ ಇರುವ ಕೋಟ್ಯಂತರ ಮಂದಿ ಟಿ.ವಿ. ಪರದೆಯ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಿದರು. ರಾಮ ಮಂದಿರದ ಉದ್ಘಾಟನೆಯು ದೇಶದ ರಾಜಕೀಯ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಬಹಳ ಮಹತ್ವದ್ದು ಎಂದು ವಿಶ್ಲೇಷಿಸಲಾಗಿದೆ.* ಲಕ್ಷ್ಮೀಕಾಂತ ದೀಕ್ಷಿತ್ ಮತ್ತು ಗಣೇಶ್ವರ ದ್ರಾವಿಡ್ ಮತ್ರಿ ನೇತೃತ್ವದಲ್ಲಿ 121 ಮಂದಿ ವೈದಿಕ ವಿದ್ವಾಂಸರು ಮಂತ್ರ ಪಠಣ ಹಾಗೂ ವಿಶೇಷ ಪೂಜೆಯ ಮೂಲಕ ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಮ ಮಂದಿರದ ಗರ್ಭಗುಡಿಯಲ್ಲಿ ಮೋದಿ ಅಷ್ಟೇ ಅಲ್ಲದೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಎಸ್)  ಸರಸಂಘಚಾಲಕ ಮೋಹನ್ ಭಾಗವತ್ ಮತ್ತಿತರರೂ ಅಡಿ ಇದ್ದರು.* ಮೋದಿ ಅವರು ಶುಭಪ್ರದವಾದ ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ನಡೆಸಿದರು. ಈ ಮುಹೂರ್ತವು 84 ಸೆಕೆಂಡುಗಳಷ್ಟು ಅವಧಿಗೆ ಇತ್ತು. ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಮೋದಿ ಅವರು ಧಾರ್ಮಿಕ ವಿಧಿಯ ಭಾಗವಾಗಿ ಸಂಕಲ್ಪ ನೆರವೇರಿಸಿದರು.* ಮೂರ್ತಿ ಕೆತ್ತನೆ ಸಂದರ್ಭದಲ್ಲಿ ನಾನು  ನಿದ್ದೆಗೆಟ್ಟು ಕೆಲಸ ಮಾಡಿದ್ದೇನೆ. ಅಷ್ಟು ಶ್ರಮ ಹಾಕಿದ್ದಕ್ಕೆ ಫಲ ಸಿಕ್ಕಿದೆ. ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ದಿನ' ಎಂದು ಅವರು ಬಾಲರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಅವರು ಹೇಳಿದ್ದಾರೆ. 'ನಾನು ಮೂರ್ತಿ ಕೆತ್ತುವ ಕೆಲಸ ಕಲಿತಿದ್ದು ನನ್ನ ತಂದೆಯಿಂದ. ಅವರು ಇದ್ದಿದ್ದರೆ ನನ್ನನ್ನು ಇಲ್ಲಿ ಕಂಡು ಬಹಳ ಹೆಮ್ಮೆಪಡುತ್ತಿದ್ದರು' ಎಂದು ಹೇಳಿದ್ದಾರೆ.