* ಕೇಂದ್ರ ಲೋಕಸೇವಾ ಆಯೋಗ(UPSC)ದ ಅಧ್ಯಕ್ಷ ಡಾ.ಮನೋಜ್ ಸೋನಿ ವೈಯಕ್ತಿಕ ಕಾರಣಗಳಿಂದ ಜುಲೈ 20 ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿ 2029ಕ್ಕೆ ಕೊನೆಗೊಳ್ಳಬೇಕಿತ್ತು ಆದರೆ 5 ವರ್ಷದ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಅವರು ರಾಜೀನಾಮೆ ನೀಡಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.* ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿವಾದದ ನಡುವೆ ಯುಪಿಎಸ್ಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿವಾದ ಮತ್ತು ಆರೋಪಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಯುಪಿಎಸ್‌ಸಿ ಅಧ್ಯಕ್ಷರು 15 ದಿನಗಳ ಹಿಂದೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಇನ್ನೂ ಅಂಗೀಕಾರವಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಐಟಿ ವರದಿ ಮಾಡಿದೆ.* 2017 ರಿಂದ 2023 ರವರೆಗೆ ಮನೋಜ್ ಸೋನಿ ಅವರು ಯುಪಿಎಸ್ ಸಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಖ್ಯಾತ ಶಿಕ್ಷಣ ತಜ್ಞರಾದ 59 ವರ್ಷದ ಸೋನಿ 2017ರ ಜೂನ್ 28ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2023ರ ಮೇ 16ರಂದು ಆಯೋಗದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ಯುಪಿಎಸ್‌ಸಿ ಅಧ್ಯಕ್ಷರಾಗಿ ಮುಂದುವರೆಯಲು ಅವರು ಉತ್ಸುಕರಾಗಿಲ್ಲ. * 2009ರ ಆಗಸ್ಟ್ 1ರಿಂದ 2015ರ ಜುಲೈ 31ರವರೆಗೆ ಗುಜರಾತ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಸೋನಿ ಸತತವಾಗಿ ಎರಡು ಅವಧಿಗಳಿಗೆ ಕುಲಪತಿಯಾಗಿದ್ದರು. ಇದಕ್ಕೂ ಮುನ್ನ 2005ರಿಂದ 2008ರ ಏಪ್ರಿಲ್ರವರೆಗೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಸೋನಿ ಭಾರತದ ಅತ್ಯಂತ ಕಿರಿಯ ಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.