* ರಷ್ಯಾ ಪ್ರವಾಸ ಮುಗಿಸಿಕೊಂಡು ಜುಲೈ 10 ರಂದು ಆಸ್ಟ್ರಿಯಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಯೆನ್ನಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಕಳೆದ 41 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಗೆ ಭೇಟಿ ನೀಡಿದ್ದು ಇದೇ ಮೊದಲು ಎನ್ನಲಾಗಿದೆ.* ಪ್ರಧಾನಿ ಮೋದಿ ಅವರು ಆಸ್ಟ್ರಿಯಾ ಚಾನ್ಸೆಲರ್‌ ಕಾರ್ಲ್ ನೆಹ್ಮರ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ 'ವಾಣಿಜ್ಯ ಬಂಧ'ವನ್ನು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಕೈಗೊಂಡರು. ಭಾರತದಲ್ಲಿ ಹೂಡಿಕೆಗೆ ಹೆಚ್ಚುಅವಕಾಶಗಳಿದ್ದು, ಬಂಡವಾಳ ಹೂಡುವಂತೆ ಮೋದಿ ಅವರು ಆಸ್ಟ್ರಿಯಾದ ಉದ್ಯಮಿಗಳಿಗೆ ಕರೆ ನೀಡುವ ಮೂಲಕ 'ಮೇಕ್‌ ಇನ್‌ ಇಂಡಿಯಾ' ಮಂತ್ರ ಹೇಳಿದರು.* ನಾವು ಜಗತ್ತಿಗೆ ಯುದ್ಧವನ್ನು ನೀಡಿಲ್ಲ, ಬದಲಾಗಿ ಬುದ್ಧನನ್ನು ನೀಡಿದ್ದೇವೆ. ಭಾರತವು ಯಾವಾಗಲೂ ಶಾಂತಿ ಹಾಗೂ ಸಮೃದ್ಧಿಯನ್ನು ನೀಡುತ್ತಾ ಬಂದಿದೆ. ಹೀಗಾಗಿಯೇ 21ನೇ ಶತಮಾನದಲ್ಲಿ ಅದು ತನ್ನ ಪಾತ್ರವನ್ನು ಬಲಪಡಿಸಿಕೊಳ್ಳಲಿದೆ ಎಂದು ವಿಯೆನ್ನಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.* ''ಭಾರತ ಮತ್ತು ಆಸ್ಟ್ರಿಯಾದ ಉದ್ಯಮಿಗಳನ್ನು ಭೇಟಿಯಾಗಿದ್ದೇನೆ. ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು ಇನ್ನಷ್ಟು ವೃದ್ಧಿಸಲಿದೆ'' ಎಂದು ಮೋದಿ ಮಾತುಕತೆ ನಂತರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರು.* ಆಸ್ಟ್ರಿಯಾ ಚಾನ್ಸೆಲರ್‌ ಕಾರ್ಲ್ ಅವರು ''ಆಸ್ಟ್ರಿಯಾ ಮತ್ತು ಭಾರತದ ತಾಂತ್ರಿಕ ವಿಶ್ವವಿದ್ಯಾಲಯಗಳ ನಡುವಿನ ಸಹಕಾರ ಒಪ್ಪಂದಗಳು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆಯಾಗಲಿವೆ'' ಎಂದು ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿದರು.