* ಹೊಸ ವರ್ಷದ ಆರಂಭದಲ್ಲೇ ಆಕಾಶ ಪ್ರೇಮಿಗಳಿಗೆ ಅದ್ಭುತ ದೃಶ್ಯ ಕಾದಿದೆ. ಜನವರಿ 3, ಶನಿವಾರ ಸೂಪರ್‌ಮೂನ್ ಸಂಭವಿಸಲಿದ್ದು, ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಇದನ್ನು ಕಾಣಬಹುದು. ಈ ದಿನ ಚಂದ್ರನು ಭೂಮಿಗೆ ಅತ್ಯಂತ ಸಮೀಪದ ಸ್ಥಾನವಾದ ಪೆರಿಜಿಯಲ್ಲಿ ಇರುವ ಕಾರಣ, ಸಾಮಾನ್ಯ ಪೂರ್ಣಚಂದ್ರನಿಗಿಂತ ಹೆಚ್ಚು ದೊಡ್ಡದಾಗಿ ಹಾಗೂ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದೆ.* ವಿಜ್ಞಾನಿಗಳ ಪ್ರಕಾರ, ಈ ಸೂಪರ್‌ಮೂನ್ ಭೂಮಿಯಿಂದ ಸುಮಾರು 3.56 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು, ಸಾಮಾನ್ಯ ಪೂರ್ಣಚಂದ್ರನಿಗಿಂತ ಸುಮಾರು 14 ಶೇಕಡಾ ದೊಡ್ಡದು ಮತ್ತು 30 ಶೇಕಡಾ ಹೆಚ್ಚು ಪ್ರಕಾಶಮಾನವಾಗಿ ಕಾಣಲಿದೆ. ಸೂರ್ಯಾಸ್ತದ ಬಳಿಕ ಚಂದ್ರನು ದಿಗಂತದ ಸಮೀಪದಲ್ಲಿರುವಾಗ ಕಿತ್ತಳೆ-ಹಳದಿ ಬಣ್ಣದ ಛಾಯೆ ಪಡೆದು ಇನ್ನಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ.* ಚಂದ್ರನು ಭೂಮಿಯ ಸುತ್ತಲೂ ಪರಿಕ್ರಮೆ ಮಾಡುವಾಗ, ಸೂರ್ಯನಿಗೆ ವಿರುದ್ಧದ ದಿಕ್ಕಿನಲ್ಲಿ ಬಂದು, ಭೂಮಿಗೆ ಅತೀ ಸಮೀಪದ ಸ್ಥಾನದಲ್ಲಿರುವಾಗ ಪೂರ್ಣಚಂದ್ರನಾಗಿದರೆ ಅದನ್ನು ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಸಮೀಪದ ಭಾಗ ಸಂಪೂರ್ಣವಾಗಿ ಬೆಳಗಿರುವುದರಿಂದ ಅದು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತದೆ.* ಸ್ಪೇಸ್ ಡಾಟ್ ಕಾಮ್ ವರದಿಯಂತೆ, ಸೂಪರ್‌ಮೂನ್ ತನ್ನ ಗರಿಷ್ಠ ಹಂತವನ್ನು ಜನವರಿ 3ರಂದು ಸಂಜೆ ಸುಮಾರು 5.30–5.45ರ ವೇಳೆಗೆ (ಭಾರತೀಯ ಸಮಯ) ತಲುಪಲಿದೆ. ಇದು ಬರಿಗಣ್ಣಿನಿಂದಲೇ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ.ತಜ್ಞರ ಮಾತಿನಂತೆ, ಚಂದ್ರನ ಈ ಸಮೀಪ ಸಂಚಾರದಿಂದ ಸಮುದ್ರಗಳಲ್ಲಿ ಉಬ್ಬರ–ಇಳಿತದ ತೀವ್ರತೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ.