Loading..!

Back
ಕರ್ನಾಟಕ ಟಿಇಟಿ ಪರೀಕ್ಷೆ ಅಂತಿಮ ಹಂತದ ತಯಾರಿ

| Published on: 18 ಡಿಸೆಂಬರ್ 2019

Image not found

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಟಿ.ಇ.ಟಿ.! ಹೀಗಾಗಿ, ಇಲ್ಲಿ ಕೇವಲ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ, ವೇಗವಾಗಿ ಉತ್ತರಿಸುವುದು ಮಾತ್ರವಲ್ಲ, ಮಕ್ಕಳ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರಿತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಿಗೆ ವಿದ್ಯಾಭ್ಯಾಸದ ಜೊತೆಗೆ, ಜೀವನದ ಮೌಲ್ಯಗಳು, ಆದರ್ಶಗಳನ್ನು ಕಲಿಸಬೇಕಾದ ಗುರುತರವಾದ ಜವಾಬ್ದಾರಿ ಇರುತ್ತದೆ. ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೆ ಮೊದಲು ಶಿಕ್ಷಕರು ಅವುಗಳನ್ನು ಪಾಲಿಸಬೇಕಾಗುತ್ತದೆ.

ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.
ಪದಜೋಡಣೆ ವಿಧಾನ : ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ. ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು? ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು, ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ! ಇಲ್ಲಿ ಅವರಂಗಿ ಜೇಬು ಔರಂಗಜೇಬ್, ಮುರಿದು - ಮುರಾದ್ ಸೂಜಿ - ಶೂಜ ದಾರ - ದಾರ ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ ! ಎಷ್ಟು ಸರಳ ಅಲ್ಲವೇ ! ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು. ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.
ಮೈಂಡ್ ಮ್ಯಾಪ್ ವಿಧಾನ : ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ. ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಮೈಂಡ್ ಮ್ಯಾಪ್‌ನ ಒಂದು ಉದಾಹರಣೆ: ಸರಳವಾದ ತಾಳೆ ನೋಡುವ ಪದ್ಧತಿ ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ. ಹೀಗೆ ತಾಳೆ ನೋಡಿ ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2 ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು. ಉದಾ : 123ರ ವರ್ಗ ಎ) 15129 ಬಿ) 15139 ಸಿ) 25129 ಡಿ) 15229 ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ, 1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9 ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ. ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ ! ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು! ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.
References: ಲೇಖಕರು ವೆಂಕಟ ಸುಬ್ಬ ರಾವ್. ವಿ (ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)
Prajavani News paper (18-12-2019)