Life is like this loading!

We've to prepare well to perform better

Image not found
ADVERTISEMENT
Image not found
ADVERTISEMENT
Image not found
Back
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳಿಗೆ ಸಿದ್ಧತೆ ಹೇಗೆ ?

Author:Basavaraj Halli | Published on: 8 ಜುಲೈ 2019

Image not found

KSP PSI Exam Preparation:

ಪೊಲೀಸ್‌ ಇಲಾಖೆಯು ಸಬ್‌ಇನ್ಸ್‌ಪೆಕ್ಟರ್‌ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ.

ಈ ಪರೀಕ್ಷೆಯು ಪದವಿ ಮಟ್ಟದ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪತ್ರಿಕೆ-1ರಲ್ಲಿ
ಪ್ರಬಂಧ ಬರಹ,
ಸಾರಾಂಶ ಬರಹ,
ಭಾಷಾಂತರ ಪ್ರಶ್ನೆಗಳು ಇರುತ್ತವೆ.

ಪ್ರಬಂಧ ಬರಹದಲ್ಲಿ ನೀಡಲಾಗುವ ವಿಷಯವನ್ನು ಇಟ್ಟುಕೊಂಡು 600 ಶಬ್ದಗಳ ಮಿತಿಯಲ್ಲಿ ನೀವು ಪ್ರಬಂಧ ಬರೆಯಬೇಕಾಗಿರುತ್ತದೆ.
ಇದಕ್ಕಾಗಿ ಪ್ರಚಲಿತ ವಿದ್ಯಮಾನಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಅಲ್ಲದೆ, ಪ್ರಬಂಧ ಮಂಡನೆಯ ಶೈಲಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಪ್ರಬಂಧಕ್ಕೆ 20 ಅಂಕಗಳು ನಿಗದಿಯಾಗಿರುತ್ತದೆ.

ಪ್ರಬಂಧದ ಜತೆ ಸಾರಾಂಶ ಬರಹ (ಪ್ರೇಸೀ) ಪ್ರಶ್ನೆಯನ್ನೂ ಕೇಳಲಾಗಿರುತ್ತದೆ.
ಕೊಟ್ಟಿರುವ ವಿಷಯವನ್ನು ಸರಿಯಾಗಿ ಓದಿ, ವಿಷಯವನ್ನು ಗ್ರಹಿಸಿ, ಗುರುತು ಹಾಕಿಕೊಂಡು, ಸಾರಾಂಶ ಬರೆಯುವುದನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕು. ಇದಕ್ಕೆ 10 ಅಂಕ ನಿಗದಿಯಾಗಿರುತ್ತದೆ.

ಇದಲ್ಲದೆ, ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಲು ಕೇಳಲಾಗಿರುತ್ತದೆ. ಒಟ್ಟು 20 ಅಂಕಗಳನ್ನು ಭಾಷಾಂತರಕ್ಕೆ ನಿಗದಿಪಡಿಸಲಾಗಿರುತ್ತದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಪತ್ರಿಕೆಗೆ ನೀಡಲಾಗುವ ಉತ್ತರ ಪತ್ರಿಕೆಯಲ್ಲಿ ಕೇವಲ 10 ಪುಟಗಳು ಮಾತ್ರ ಇರುತ್ತವೆ. ಅಭ್ಯರ್ಥಿಗಳು ಈ ಮಿತಿಯಲ್ಲಿಯೇ ಉತ್ತರಿಸಬೇಕು. ಏಕೆಂದರೆ ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಉತ್ತರ ಪತ್ರಿಕೆಯನ್ನು ಒದಗಿಸಲಾಗುವುದಿಲ್ಲ. ಹತ್ತು ಪುಟಗಳ ಉತ್ತರ ಬರೆಯಲು ಒಂದೂವರೆಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಅಂದಹಾಗೆ ಇದರಲ್ಲಿ ಕನಿಷ್ಟ ಅಂಕಗಳು ಇರುವುದಿಲ್ಲ.

ಪ್ರಶ್ನೆ ಪತ್ರಿಕೆ -2:
ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿರಲಿದ್ದು, ವಸ್ತುನಿಷ್ಟ (ಅಬ್ಜೆಕ್ಟೀವ್‌) ಮಾದರಿಯಲ್ಲಿ ನಡೆಯಲಿದೆ. ಒಟ್ಟು 150 ಅಂಕ ನಿಗದಿಯಾಗಿರುತ್ತದೆ. ಈ ಪತ್ರಿಕೆಗೆ ಉತ್ತರ ಗುರುತಿಸಲು ಒಂದೂವರೆ ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯ‌ವನ್ನು ಅಳೆಯುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲಾಗುವುದರಿಂದ ಪ್ರಶ್ನೆಗಳು ವಿಭಿನ್ನ ವಿಷಯಕ್ಕೆ ಸಂಬಂಧಿಸಿದಂತೆ ಇರಲಿವೆ. ಇದಕ್ಕಾಗಿ ನೀವು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಂಡಿರಬೇಕು. ಅಲ್ಲದೆ, ಸಾಮಾನ್ಯ ಜ್ಞಾನ, ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ, ಇತಿಹಾಸ, ಭೂಗೋಳ, ವಿಜ್ಞಾನ, ಕಲೆ, ಸಾಹಿತ್ಯ, ನೀತಿ ಶಿಕ್ಷಣ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿಕೊಳ್ಳಬೇಕು. ಮುಖ್ಯವಾಗಿ 5 ರಿಂದ 10ನೇ ತರಗತಿಯವರೆಗಿನ ಎಲ್ಲ ಪಠ್ಯ ಪುಸ್ತಕಗಳನ್ನು (ಭಾಷೆ ಹೊರತುಪಡಿಸಿ) ಅಭ್ಯಾಸ ಮಾಡಿದರೆ ಒಳ್ಳೆಯದು.

ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ, ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ.25 (.375) ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ. ಹೀಗಾಗಿ ಪ್ರತಿ ಪ್ರಶ್ನೆಗೆ ಉತ್ತರ ಗುರುತಿಸುವಾಗಲೂ ಅಭ್ಯರ್ಥಿಯು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.

ನುಸುಳಲು ಅಡ್ಡದಾರಿ ಇಲ್ಲಿಲ್ಲ:
ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ನಡೆಸುವ ಪರೀಕ್ಷೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಇದು ದೇಶಕ್ಕೆ ಮಾದರಿ. ಹಣಕಾಸಿನ ವ್ಯವಹಾರ, ಮಂತ್ರಿಗಳ ಶಿಫಾರಸು, ರಾಜಕೀಯ ಹಸ್ತಕ್ಷೇಪ ಇಲ್ಲಿಲ್ಲ. ಹಾಗಾಗಿ, ಲಂಚ ನೀಡಿ ಮಧ್ಯವರ್ತಿಗಳ ಸಹಾಯದಿಂದ ಇಲಾಖೆಯೊಳಗೆ ನುಸುಳಬಹುದು ಎಂಬ ಲೆಕ್ಕಾಚಾರ ಹೊಂದಿದ್ದರೆ, ಮೊದಲು ಅದರಿಂದ ಹೊರಬನ್ನಿ. ಮಧ್ಯವರ್ತಿಗಳು ನೀಡುವ ಹುಸಿ ಭರವಸೆ ನಂಬಿ, ನಿಮ್ಮ ಹಣ ಹಾಗೂ ಸಮಯ- ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ.

ಯುದ್ಧ ತಯಾರಿಗೆ ಮುನ್ನ ವಿಶ್ವಾಸ ಮುಖ್ಯ ಪೊಲೀಸ್‌ ಇಲಾಖೆ ಆಹ್ವಾನಿಸಿರುವ ಪಿಎಸ್‌ಐ ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರಲ್ಲ ಎಂಬ ಅಂಜಿಕೆಯ ಮನೋಭಾವವನ್ನು ಮೊದಲು ಮನಸ್ಸಿನಿಂದ ಕಿತ್ತೊಗೆಯಿರಿ ! ಆಹ್ವಾನಿತ ಹುದ್ದೆಗಳಲ್ಲಿ, ನನ್ನದೊಂದು ಹುದ್ದೆ ಇದೆ ಎಂಬ ವಿಶ್ವಾಸವನ್ನು ತಲೆಯಲ್ಲಿ ಇಟ್ಟುಕೊಂಡೇ ಸಿದ್ದತೆಗೆ ಇಳಿಯಿರಿ. ಏಕೆಂದರೆ, ಇಲಾಖೆಯವರು ನಡೆಸಲಿರುವ ಪರೀಕ್ಷೆ, ನಿಮ್ಮ ಸಾಮರ್ಥ್ಯ‌ಕ್ಕೆ ಏನೇನೂ ಅಲ್ಲ.

ಪಠ್ಯ ಪುಸ್ತಕ ಓದಿ:
ಪೊಲೀಸ್‌ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ನಿಮ್ಮ ಮಾನಸಿಕ ಸಾಮರ್ಥ್ಯ‌ವನ್ನು ವೃದ್ಧಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸಿಗುವ ಗೈಡ್‌ಗಳು, ಹಳೆಯ ಪ್ರಶ್ನೆಪತ್ರಿಕೆಗಳ ಉತ್ತರಗಳನ್ನು ಒಳಗೊಂಡ ಪುಸ್ತಕಗಳನ್ನಷ್ಟೇ ಆಶ್ರಯಿಸಬೇಡಿ. ಪ್ರಶ್ನೆ ಪತ್ರಿಕೆಯು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ತಿಳಿಯಲು ಸಿಲೆಬಸ್‌ ತಿಳಿದುಕೊಳ್ಳಿ. ವಿಷಯದ ಪ್ರಾಥಮಿಕ ಮಾಹಿತಿ ಪಡೆಯಲು 5 ರಿಂದ 10ನೇ ತರಗತಿಯವರೆಗಿನ ರಾಜ್ಯ ಪಠ್ಯ ಹಾಗೂ ಸಿಬಿಎಸ್‌ಸಿ ಪಠ್ಯಗಳ ಅಧ್ಯಯನವೂ ಬೇಕಾಗುತ್ತದೆ.

ಸಬ್‌ ಇನ್ಸ್‌ಪೆಕ್ಟರ್‌ ಪರೀಕ್ಷೆಯ ಪತ್ರಿಕೆ-2ಕ್ಕೆ 150 ಅಂಕ ನಿಗದಿಯಾಗಿರುತ್ತದೆ. ಈ ಅಂಕಗಳ ಪೈಕಿ ಶೇ. 60ರಿಂದ 70 ರಷ್ಟು ಭಾಗದ ಪ್ರಶ್ನೆಗಳು ಇತಿಹಾಸ, ಸಮಾಜ ವಿಜ್ಞಾನ, ಭಾರತೀಯ ಸಂವಿಧಾನ, ರಾಜ್ಯಶಾಸ್ತ್ರ, ಜೀವನ ಶಾಸ್ತ್ರದಂಥ ವಿಷಯಗಳಿಗೆ ಸಂಬಂಧಿ ಸಿರುತ್ತದೆ. ಪರಿಸರ ಶಾಸ್ತ್ರವೂ ಇತ್ತೀಚಿನ ವರ್ಷದ ಪರೀಕ್ಷೆಗಳಲ್ಲಿ ಆದ್ಯತೆಯನ್ನು ಪಡೆದುಕೊಳ್ಳುತ್ತಿದೆ.
ಉಳಿದಂತೆ ಭೌಗೋಳಿಕ ಅಂಶಗಳು, ಮತ-ಧರ್ಮಕ್ಕೆ ಸಂಬಂಧಿಸಿದ ಐದಾರು ಪ್ರಶ್ನೆಗಳು ಇದ್ದೇ ಇರುತ್ತವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳು, ಪ್ರಯೋಗಾಲಯಗಳು, ನೀತಿ ನಿರೂಪಕ ಪ್ರಕಾರಗಳು, ಶಾಸನಾತ್ಮಕ ಸಂಸ್ಥೆಗಳಿಗೆ ಸಂಬಂಧಿ ಸಿದ ಪ್ರಶ್ನೆಗಳು ಇರಲಿದ್ದು, ಇವುಗಳಿಗೆ ಐದಾರು ಅಂಕ ನಿಶ್ಚಿತವಾಗಿರುತ್ತದೆ. ರಾಜ್ಯ-ದೇಶ- ವಿಶ್ವದ ಪ್ರಥಮಗಳು, ಸಂಶೋಧಕರು, ಅವಿಷಾಕರಗಳು, ವಿಜ್ಞಾನ ಕ್ಷೇತ್ರದ ಬೆಳವಣಿಗೆಗಳು ಕೂಡ ಇರಲಿದ್ದು, ಇದಕ್ಕೆ ಐದಾರು ಅಂಕಗಳು ನಿಗದಿಯಾಗಿರುತ್ತದೆ.

ಅಲ್ಲದೆ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ಆರೇಳು ಪ್ರಶ್ನೆಗಳಿರಲಿದ್ದು, ಇದನ್ನು ತಿಳಿದುಕೊಳ್ಳಲು ಪ್ರತಿದಿನವೂ ದಿನಪತ್ರಿಕೆಗಳನ್ನು ಓದಿ.

ಕಾನೂನು ತಿಳಿದುಕೊಳ್ಳಿ:
ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಕಾನೂನುಗಳು ಏನು ಹೇಳುತ್ತವೆ, ಯಾವ ಸಂದರ್ಭದಲ್ಲಿ ಪೊಲೀಸರು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಪ್ರಕರಣ ದಾಖಲಿಸಿಕೊಳ್ಳುವುದು ಹೇಗೆ, ತನಿಖೆ ನಡೆಸುವುದು ಹೇಗೆ, ಪೊಲೀಸರಿಗಿರಬೇಕಾದ ಸೂಕ್ಷ್ಮತೆಗಳೇನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಅಲ್ಲದೆ ಇತ್ತೀಚೆಗೆ ಕಂಪ್ಯೂಟರ್‌, ಇಂಟರ್‌ನೆಟ್‌ಗೆ ಸಂಬಂಧಿ ಸಿದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಇದನ್ನೂ ಸರಿಯಾಗಿ ತಿಳಿದುಕೊಳ್ಳಿ. ಸರಳ ಕಾನೂನು ಪುಸ್ತಕಗಳನ್ನು ಅಭ್ಯಾಸ ಮಾಡಲು ಮರೆಯಬೇಡಿ.

-ಶಂಕರ್ ಜಿ ಬೆಳ್ಳುಬ್ಬಿ Asst.Commissioner(CT)
ಹಳ್ಳದ ಗೆಣ್ಣೂರ

KSP PSI Exam Preparation

References: KSP PSI Exam Preparation
Image not found