Loading..!

ಪರೀಕ್ಷೆಗೆ ಕೆಲವೇ ದಿನ ಇರುವಾಗ 945 AO/AAO ಹುದ್ದೆಗಳ KEA ನೇಮಕಾತಿ ರದ್ದಾಗುವ ಆತಂಕ: ಆಗಸ್ಟ್ 8, 9ರ ಪರೀಕ್ಷೆಯೂ ಅನುಮಾನ!
Published by: Heena Sheregar | Date:29 ಜುಲೈ 2026
not found
ಬೆಂಗಳೂರು: ರಾಜ್ಯದ ಯುವಕರಿಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ಕೃಷಿ ಇಲಾಖೆಯ 945 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮತ್ತೆ ಅನಿಶ್ಚಿತತೆ ಎದುರಾಗಿದೆ. ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ರಾಜ್ಯ ಸರ್ಕಾರವು 70 ಸಾವಿರಕ್ಕೂ ಹೆಚ್ಚು ಖಾಲಿ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ವೇಗ ನೀಡಿರುವ ಬೆನ್ನಲ್ಲೇ, ಕೃಷಿ ಇಲಾಖೆಯ ಈ ಬಹುನಿರೀಕ್ಷಿತ ನೇಮಕಾತಿ ಪ್ರಕ್ರಿಯೆ ಮೂರನೇ ಬಾರಿಗೆ ಸ್ಥಗಿತಗೊಳ್ಳುವ ಸಾಧ್ಯತೆ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.

945 ಹುದ್ದೆಗಳ ವಿವರ:
  • ಕೃಷಿ ಅಧಿಕಾರಿ (AO) :128 ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿ (AAO) :  817 ಹುದ್ದೆಗಳು
  • ಒಟ್ಟು ಹುದ್ದೆಗಳು : 945
ಈ ಹುದ್ದೆಗಳಿಗೆ ಒಟ್ಟು 36,313 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ:
  • AO ಹುದ್ದೆಗೆ: 18,124 ಅರ್ಜಿಗಳು
  • AAO ಹುದ್ದೆಗೆ: 18,189 ಅರ್ಜಿಗಳು
ಎಂಬುದು KEA ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಬಿ.ಇ./ಬಿ.ಟೆಕ್ ಬಯೋಟೆಕ್ನಾಲಜಿ ಪದವೀಧರರೇ ವಿವಾದಕ್ಕೆ ಕಾರಣ?
ರಾಜ್ಯ ಸರ್ಕಾರವು 2026ರ ಜೂನ್ 19ರಂದು ಹೊರಡಿಸಿದ್ದ ಆದೇಶದ ಮೂಲಕ ಬಿ.ಇ. ಬಯೋಟೆಕ್ನಾಲಜಿ ಹಾಗೂ ಬಿ.ಟೆಕ್ ಬಯೋಟೆಕ್ನಾಲಜಿ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಇದರ ಬೆನ್ನಲ್ಲೇ ಕೃಷಿ ಪದವೀಧರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಲಭ್ಯ ಮಾಹಿತಿಯ ಪ್ರಕಾರ,
  • ಬಿ.ಇ. ಬಯೋಟೆಕ್ನಾಲಜಿ ಪದವೀಧರರು: 366 ಮಂದಿ
  • ಬಿ.ಟೆಕ್ ಬಯೋಟೆಕ್ನಾಲಜಿ ಪದವೀಧರರು: 656 ಮಂದಿ
  • ಒಟ್ಟು 1,022 ಮಂದಿ ಬಯೋಟೆಕ್ನಾಲಜಿ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಅಧಿಸೂಚನೆಯನ್ನೇ ರದ್ದುಪಡಿಸುವ ಕುರಿತು ಚರ್ಚೆ ನಡೆದಿದ್ದು, ನೇಮಕಾತಿ ಪ್ರಕ್ರಿಯೆ ಮತ್ತೊಮ್ಮೆ ಆರಂಭಿಕ ಹಂತಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಆಗಸ್ಟ್ 8 ಮತ್ತು 9ರಂದು ಪರೀಕ್ಷೆ ನಡೆಯಬೇಕಿತ್ತು
KEA ಈಗಾಗಲೇ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಅದರ ತಾತ್ಕಾಲಿಕ ಫಲಿತಾಂಶವನ್ನೂ ಪ್ರಕಟಿಸಿದೆ. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು 2026ರ ಆಗಸ್ಟ್ 8 ಮತ್ತು 9ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು.

ಈ ಹಿಂದೆ ಜುಲೈ 25 ಮತ್ತು 26ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದರೂ, ಅದೇ ದಿನಗಳಲ್ಲಿ RBI ಅಧಿಕಾರಿಗಳ ನೇಮಕಾತಿ ಪರೀಕ್ಷೆ ನಡೆಯಲಿದ್ದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಅಧಿಸೂಚನೆ ರದ್ದುಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿರುವುದರಿಂದ ಪರೀಕ್ಷೆ ನಿಗದಿತ ದಿನಾಂಕದಲ್ಲೇ ನಡೆಯುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.


3ನೇ ಬಾರಿಗೆ ಅಧಿಸೂಚನೆ ರದ್ದಾಗುವ ಭೀತಿ!
  • ಮೊದಲ ಹಂತ: 2024 ರಲ್ಲಿ KPSC ಮೂಲಕ ಮೊದಲ ಅಧಿಸೂಚನೆ ಹೊರಡಿಸಲಾಗಿತ್ತು. ಒಳಮೀಸಲಾತಿ ಕಾರಣಕ್ಕೆ ಅದು ರದ್ದಾಗಿ KEAಗೆ ವಹಿಸಲಾಯಿತು.
  • ಎರಡನೇ ಹಂತ: KEA ಏಪ್ರಿಲ್ 18, 2026 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪರಿಶಿಷ್ಟ ಜಾತಿಯ ಒಳಮೀಸಲಾತಿ ರೋಸ್ಟರ್ ಬಿಂದುಗಳ ಕಾರಣ ಮೇ 4 ರಂದು ರದ್ದುಗೊಳಿಸಿತು.
  • ಮೂರನೇ ಹಂತ: ಮೇ 30 ರಂದು KEA ಮರು ಅಧಿಸೂಚನೆ ಹೊರಡಿಸಿ, ಕನ್ನಡ ಕಡ್ಡಾಯ ಪರೀಕ್ಷೆಯನ್ನೂ ನಡೆಸಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿತ್ತು. ಇದೀಗ ಈ 3ನೇ ಅಧಿಸೂಚನೆಯೂ ರದ್ದಾಗುವ ಹಂತಕ್ಕೆ ತಲುಪಿದೆ.
ಅಭ್ಯರ್ಥಿಗಳಲ್ಲಿ ಆಕ್ರೋಶ:
ನೇಮಕಾತಿ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಅಧಿಸೂಚನೆಯನ್ನು ರದ್ದುಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿರುವುದು ಸಾವಿರಾರು ಅಭ್ಯರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಕನ್ನಡ ಪರೀಕ್ಷೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳು, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆ ಅನ್ಯಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಗಮನಿಸಿ: ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ರದ್ದುಪಡಿಸಿರುವ ಕುರಿತು ಇನ್ನೂ ಯಾವುದೇ ಅಂತಿಮ ಸರ್ಕಾರಿ ಆದೇಶ ಪ್ರಕಟವಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಮಾಹಿತಿ ಮಾತ್ರ ಲಭ್ಯವಿದ್ದು, ಅಭ್ಯರ್ಥಿಗಳು KEA ಹೊರಡಿಸುವ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.

Comments