ಪರಿಶಿಷ್ಟ ಸಮುದಾಯ ಪ್ರತಿನಿಧಿಸುವ ಸಚಿವರ ವಿರೋಧದ ಮಧ್ಯೆಯೂ ಒಳಮೀಸಲಾತಿ ಅನ್ವಯಿಸದೆ 817 ಸಹಾಯಕ ಕೃಷಿ ಅಧಿಕಾರಿಗಳೂ ಸೇರಿ 945 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದಾಗಿದೆ. ಆಯೋಗ ವರದಿ ನೀಡಿ, ಒಳ ಮೀಸಲಾತಿ ಇತ್ಯರ್ಥವಾಗುವವರೆಗೆ 2024ನೇ ಅಕ್ಟೋಬರ್ 28ಕ್ಕೆ ಅನ್ವಯ ವಾಗುವಂತೆ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆಹಿಡಿಯಬೇಕು. ಇಲಾಖೆಗಳು, ನಿಗಮ-ಮಂಡಳಿಗಳು ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆಗಳು ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು.
ಸರ್ಕಾರದ ಸ್ಪಷ್ಟ ಸೂಚನೆ ಇದ್ದರೂ ಕೆಪಿಎಸ್‌ಸಿಯು ಕಲ್ಯಾಣ ಕರ್ನಾಟಕದ 273 ಹುದ್ದೆಗಳಿಗೂ ಸೇರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿ. ಪರೀಕ್ಷಾ ವೇಳಾಪಟ್ಟಿ-ಯನ್ನೂ ಬಿಡುಗಡೆ ಮಾಡಿದೆ. ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇಕಡ 17ರಷ್ಟು ಮೀಸಲಾತಿಯ ಪೈಕಿ, ಎಡಗೈ ಸಂಬಂಧಿತ ಜಾತಿಗಳಿರುವ 'ಎ' ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ 'ಬಿ' ಪ್ರವರ್ಗಕ್ಕೆ ಶೇ 6 ಹಾಗೂ ಲಂಬಾಣಿ, ಬೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜಾತಿಗಳಿರುವ 'ಸಿ' ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ 'ಎ' ಮತ್ತು 'ಬಿ' ವೃಂದದ 945 ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ದಲಿತ ಸಮುದಾಯದ ಕೃಷಿ ಪದವೀಧರ (ಬಿ.ಎಸ್‌ಸಿ) ಅಭ್ಯರ್ಥಿ ಗಳಿಗೆ ಭಾರಿ ಅನ್ಯಾಯವಾಗುತ್ತದೆ. ದಲಿತರ ದಶಕಗಳ ಒಳ ಮೀಸಲಾತಿ ಹೋರಾಟಕ್ಕೆ ಅರ್ಥವೇ ಇಲ್ಲದಂತೆ ಆಗುತ್ತದೆ' ಎನ್ನುತ್ತಾರೆ ಮಾಜಿ ಸಚಿವ ಹೆಚ್ ಆಂಜನೇಯ.
Comments