* ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ನವೆಂಬರ್ 05 ರಂದು (ಮಂಗಳವಾರ) ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಈ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯ ವರದಿಯಾಗಿದೆ. * ಲಿಗ್ನೋಸ್ಯಾಟ್ ಎಂದು ಹೆಸರಿಸಲಾದ ಬಾಕ್ಸ್ ತರಹದ ಪ್ರಾಯೋಗಿಕ ಉಪಗ್ರಹದ ಪ್ರತಿಯೊಂದು ಬದಿಯು ಕೇವಲ 10 ಸೆಂಟಿಮೀಟರ್‌ಗಳನ್ನು (ನಾಲ್ಕು ಇಂಚುಗಳು) ಅಳತೆ ಮಾಡುತ್ತದೆ. * ಮರ ಎಂಬುದಕ್ಕೆ ಲ್ಯಾಟಿನ್ ಭಾಷೆಯಲ್ಲಿರುವ ಪದವನ್ನು ಬಳಸಿ 'ಲಿಗ್ನೋಸ್ಯಾಟ್' ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಕ್ಯೋಟೊ ವಿಶ್ವವಿದ್ಯಾಲಯ ಹಾಗೂ ಸುಮಿಟೊಮೊ ಫಾರೆಸ್ಟರಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. * ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮಾನವ ರಹಿತ ರಾಕೆಟ್‌ನಲ್ಲಿ ಇದನ್ನು ಉಡಾವಣೆ ಮಾಡಲಾಯಿತು ಎಂದು ಕ್ಯೋಟೋ ವಿಶ್ವವಿದ್ಯಾಲಯದ ಬಾಹ್ಯಾಕಾಶ ಕೇಂದ್ರ ತಿಳಿಸಿದೆ. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ಒದಗಿಸಿದ ವಿಶೇಷ ಕಂಟೇನರ್‌ನಲ್ಲಿ ಸ್ಥಾಪಿಸಲಾಗಿದೆ.* ಸ್ಪೇಸ್‌ಎಕ್ಸ್ ಮೂಲಕ ಈ ಮರದ ಉಪಗ್ರಹವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ನಂತರ ಇದನ್ನು ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಸೇರಿಸಲು ಸಂಶೋಧಕರು ಯೋಜನೆ ರೂಪಿಸಿದ್ದಾರೆ. * ಬಾಹ್ಯಾಕಾಶದಲ್ಲಿ ವಾಸಿಸಲು ಮನೆಯ ನಿರ್ಮಾಣಕ್ಕೆ ಅಗತ್ಯವಿರುವ ಮರದಿಂದ ಉಪಗ್ರಹ ನಿರ್ಮಿಸಲಾಗಿದೆ. ಗಗನಯಾನಿಗಳು ನೌಕೆಯ ಮೂಲಕ ಬಾಹ್ಯಾಕಾಶ ತಲುಪಿ ಮನುಷ್ಯನ ಇರುವಿಕೆಯ ಸಾಧ್ಯತೆ ಕುರಿತು ಕ್ಯೋಟೊ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದೆ. * ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಗಿಡಗಳನ್ನು ನೆಟ್ಟು, ಮರದ ಮನೆಗಳನ್ನು ನಿರ್ಮಿಸುವ 50 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. * '1900ರಲ್ಲಿ ವಿಮಾನವನ್ನು ಮರದಿಂದ ನಿರ್ಮಿಸಲಾಗಿತ್ತು. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದ ಕಾರಣ ಮರವು ಭೂಮಿಗಿಂತ ಹೆಚ್ಚು ದೀರ್ಘ ಕಾಲ ಬಾಳುವ ಸಾಮರ್ಥ್ಯ ಹೊಂದಿದೆ. * ಮರದ ಉಪಗ್ರಹಗಳ ಬಳಕೆ ಕಾರ್ಯಸಾಧ್ಯ' ಎಂದು ಕ್ಯೋಟೊ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೊಜಿ ಮುರಾಟಾ ಅವರು ತಿಳಿಸಿದ್ದಾರೆ.* ಈ ಉಪಗ್ರಹ ಬಳಕೆಗಾಗಿ ಜಪಾನ್‌ನಲ್ಲೇ ಬೆಳೆಯುವ ಮ್ಯಾಗ್ನೋಲಿಯಾ ಹೊನೊಕಿ ಎಂಬ ಮರವನ್ನು ಬಳಸಲಾಗಿದೆ. ಇದನ್ನು ಖಡ್ಗದ ಕವಚಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈಗಾಗಲೇ 10 ತಿಂಗಳು ಬಳಸಲಾಗಿದೆ.