* ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯೊಂದಿಗೆ ಗುರುವಾರ (ಅ.2) ವಿಜೃಂಭಣೆಯಿಂದ ಸಂಪನ್ನಗೊಂಡಿತು. ಅರಮನೆಯ ಅಂಗಳದಿಂದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯನ್ನು ಲಕ್ಷಾಂತರ ಜನ ಕಣ್ಣುಂಬಿಕೊಂಡರು.* ಗುರುವಾರ(ಅ.2) 1 ಗಂಟೆ 1 ನಿಮಿಷದಿಂದ 1 ಗಂಟೆ 16 ನಿಮಿಷಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿತು. ಬಳಿಕ ಸಂಜೆ ಕುಂಭ ಲಗ್ನದಲ್ಲಿ 4.42ರಿಂದ 5.06 ವರೆಗಿನ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ. ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಅರನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಹೆಜ್ಜೆ ಹಾಕಿದರೆ, ಕುಮ್ಮಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಿದವು.* ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು ಸೇರಿ ಗಣ್ಯರು ನಾಡದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಮೈಸೂರು ರಾಜವಂಶಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.8ನೇ ಬಾರಿಗೆ ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಬಾರಿ ಚಾಲನೆ ನೀಡಿದ ಕೀರ್ತಿಗೆ ಭಾಜನರಾದರು.* ಜಂಬೂಸವಾರಿಯ ಪ್ರಮುಖ ಅಂಶಗಳು:=> ಅಭಿಮನ್ಯುವಿನ ಜವಾಬ್ದಾರಿ: ಅಭಿಮನ್ಯು 6ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಜವಾಬ್ದಾರಿಯನ್ನು ನಿರ್ವಹಿಸಿದರು. => ಕುಮ್ಕಿ ಆನೆಗಳು: ಅಭಿಮನ್ಯುವಿಗೆ ಕಾವೇರಿ ಮತ್ತು ರೂಪ ಎಂಬ ಕುಮ್ಕಿ ಆನೆಗಳು ಸಾಥ್ ನೀಡಿದವು. => ಅದ್ದೂರಿ ಮೆರವಣಿಗೆ: ಅರಮನೆಯಿಂದ ಹೊರಟ ಮೆರವಣಿಗೆ ಬನ್ನಿಮಂಟಪ ತಲುಪಿತು, ಅಲ್ಲಿ ಅಂಬಾರಿ ಹೊತ್ತ ಅಭಿಮನ್ಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿತು. => ಜನಸಾಗರ: ಎಲ್ಲರೂ ಈ ಕಾರ್ಯಕ್ರಮವನ್ನು ವೀಕ್ಷಿಸಿ, ಚಾಮುಂಡೇಶ್ವರಿಗೆ ಜಯಘೋಷ ಮಾಡಿದರು. => ಆನೆಗಳ ದಂಡು: ದಸರಾ ಗಜಪಡೆಯ ಮುಖ್ಯ ಆನೆ ಅಭಿಮನ್ಯು ಆಗಿದ್ದು, ಒಟ್ಟು 14 ಮಂದಿ ಗಜಪಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. => ಇತರ ಕಾರ್ಯಕ್ರಮಗಳು: ಜಂಬೂಸವಾರಿಯ ನಂತರ, ಬನ್ನಿಮಂಟಪದಲ್ಲಿ ಆಕರ್ಷಕ ಪಂಜಿನ ಕವಾಯತು ನಡೆಯಿತು, ಇದನ್ನು ರಾಜ್ಯಪಾಲರು ವೀಕ್ಷಿಸಿದರು. * ಸ್ತಬ್ಧಚಿತ್ರ ಪ್ರದರ್ಶನ : ನಾಡಿನ ಸಂಸ್ಕೃತಿ ಅನಾವರಣಗೊಳಿಸುವ 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು. ಅಂದಾಜು 5 ಕಿ.ಮೀ. ದೂರದ ಬನ್ನಿಮಂಟಪದವರೆಗೆ 100ಕ್ಕೂ ಹೆಚ್ಚು ಕಲಾ ತಂಡಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಹೆಜ್ಜೆ ಹಾಕಿದವು.