* ಬೆಂಗಳೂರು ಹೊರವಲಯದ 5,800 ಎಕರೆ ಪ್ರದೇಶದಲ್ಲಿ ಮೈದಳೆಯುತ್ತಿರುವ ಕ್ವಿನ್ ಸಿಟಿಯು ವೈದ್ಯಕೀಯ ಕ್ಷೇತ್ರದ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ. * ಇದರಿಂದ ಜನರಿಗೆ ಉತ್ತಮ ಸೇವೆ ಸಿಗುವುದಲ್ಲದೆ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.* ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಕ್ವಿನ್ ಸಿಟಿ' ಯೋಜನೆಗೆ ಅತ್ಯುತ್ಕೃಷ್ಟ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ದುಂಡು ಮೇಜಿನ ಸಭೆ ನಡೆಯಿತು.* ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಆರೋಗ್ಯ ರಕ್ಷಣೆ ಬೇಡಿಕೆಗಳಿಂದ ಕರ್ನಾಟಕದ ಆರೋಗ್ಯ ಮಾರುಕಟ್ಟೆಯು ಶೇಕಡ 22 ವಾರ್ಷಿಕ ಬೆಳವಣಿಗೆಯ ದರದಲ್ಲಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.* ಕ್ವಿನ್ ಸಿಟಿಯು ವೈದ್ಯಕೀಯ ಪ್ರವಾಸೋದ್ಯಮಕ್ಕೆ ರಹದಾರಿಯಾಗಲಿದೆ. ವೈದ್ಯಕೀಯ ಸೌಲಭ್ಯಗಳು ಹಲವಾರು ವಿದೇಶಿಯರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಕ್ವಿನ್ ಸಿಟಿ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.* ''ಕ್ವಿನ್ ಸಿಟಿ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಅಭಿವೃದ್ಧಿಪಡಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿ ಇದು ತಲೆ ಎತ್ತಲಿದೆ. ಇಲ್ಲಿ ಬಯೋಟೆಕ್/ಫಾರ್ಮಾ, ಪ್ರಮಖ ಆಸ್ಪತ್ರೆಗಳು, ಉದ್ದಿಮೆಗಳು ಸ್ಥಾಪನೆಯಾಗುವುದರಿಂದ ಆರ್ಥಿಕತೆ ಇನ್ನಷ್ಟು ಚೇತರಿಕೆಯಾಗುತ್ತದೆ.