➤ ಅಮೆರಿಕಕ್ಕೆ ತೆರಳಲು ಬಯಸುವವರಿಗೆ ಈಗ ವೀಸಾ ಪ್ರಕ್ರಿಯೆ ಮತ್ತಷ್ಟು ಕಠಿಣವಾಗಿದೆ. ವೀಸಾ ನಿಯಮಗಳಲ್ಲಿ ಸ್ಟೇಟ್ ಡಿಪಾರ್ಟ್‌ಮೆಂಟ್ ಮಹತ್ವದ ಬದಲಾವಣೆ ತಂದಿದ್ದು, ಏಪ್ರಿಲ್ 28ರಿಂದಲೇ ಜಾರಿಗೆ ಬರುವಂತೆ ಹೊಸ ತಪಾಸಣಾ ಕ್ರಮಗಳನ್ನು ಜಾರಿಗೊಳಿಸಿದೆ.➤ ಹೊಸ ಬದಲಾವಣೆ: ಈ ಹಿಂದೆ ವೀಸಾ ಸಂದರ್ಶನದ ಸಮಯದಲ್ಲಿ ಕೇಳದ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಈಗ ಕಡ್ಡಾಯಗೊಳಿಸಲಾಗಿದೆ. ಮುಖ್ಯವಾಗಿ 'ಆಶ್ರಯ'ಕ್ಕೆ (Asylum) ಸಂಬಂಧಿಸಿದಂತೆ ಅರ್ಜಿದಾರರ ನಿಲುವನ್ನು ಸಂದರ್ಶನದ ವೇಳೆಯೇ ಸ್ಪಷ್ಟಪಡಿಸಿಕೊಳ್ಳುವುದು ಈ ಬದಲಾವಣೆಯ ಉದ್ದೇಶ.➤ ಸಂದರ್ಶನದ ವೇಳೆ ಕೇಳಲಾಗುವ ಹೊಸ ಪ್ರಶ್ನೆಗಳು: ಹೊಸ ಪ್ರಕ್ರಿಯೆಯ ಅಡಿಯಲ್ಲಿ ಅರ್ಜಿದಾರರು ಅಮೆರಿಕಕ್ಕೆ ಪ್ರವೇಶಿಸಿದ ನಂತರ ಅಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇದೆಯೇ ಎಂದು ನಿರ್ಣಯಿಸಲು ಈ ಕೆಳಗಿನ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ:1. ನಿಮ್ಮ ಸ್ವದೇಶದಲ್ಲಿ ಅಥವಾ ನೀವು ವಾಸಿಸುತ್ತಿದ್ದ ದೇಶದಲ್ಲಿ ನೀವು ಯಾವುದೇ ಹಾನಿ ಅಥವಾ ಕಿರುಕುಳವನ್ನು ಅನುಭವಿಸಿದ್ದೀರಾ?2. ನಿಮ್ಮ ದೇಶಕ್ಕೆ ಮರಳಲು ನೀವು ಭಯಪಡುತ್ತೀರಾ ಅಥವಾ ಅಲ್ಲಿ ಹಾನಿಯಾಗುವ ಭೀತಿ ಇದೆಯೇ?➤ ಅರ್ಜಿ ತಿರಸ್ಕರಿಸುವ ಮಾನದಂಡಗಳು: ಒಂದು ವೇಳೆ ಅರ್ಜಿದಾರರು ಮೇಲಿನ ಯಾವುದೇ ಒಂದು ಪ್ರಶ್ನೆಗೆ 'ಹೌದು' ಎಂದು ಉತ್ತರಿಸಿದರೆ ಅಥವಾ ಉತ್ತರಿಸಲು ನಿರಾಕರಿಸಿದರೆ, ಅವರ ವೀಸಾ ಅರ್ಜಿಯನ್ನು ಯಾವುದೇ ಮುಲಾಜಿಲ್ಲದೆ ತಕ್ಷಣವೇ ತಿರಸ್ಕರಿಸಲಾಗುತ್ತದೆ.- ವಲಸೆ-ರಹಿತ ವೀಸಾಗಳು: ಈ ಬದಲಾವಣೆಯು ಪ್ರವಾಸಿ ವೀಸಾ (B1/B2), ಕೆಲಸದ ವೀಸಾ (H-1B, L1) ಸೇರಿದಂತೆ ಎಲ್ಲಾ ವರ್ಗದ ವಲಸೆ-ರಹಿತ (Non-Immigrant) ವೀಸಾಗಳಿಗೆ ಅನ್ವಯಿಸುತ್ತದೆ.- ಅವಲಂಬಿತರು: ವೀಸಾ ಹೊಂದಿರುವವರ ಮೇಲೆ ಅವಲಂಬಿತವಾಗಿರುವವರಿಗೂ (Dependents) ಈ ನಿಯಮ ಅನ್ವಯವಾಗಲಿದೆ.➤ ಬದಲಾವಣೆಯ ಹಿಂದಿನ ಉದ್ದೇಶ: ವೀಸಾ ಪ್ರಕ್ರಿಯೆಯ ದುರುಪಯೋಗವನ್ನು ತಡೆಯುವುದು ಅಮೆರಿಕ ಸರ್ಕಾರದ ಮುಖ್ಯ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಪ್ರವಾಸಿ ಅಥವಾ ಕೆಲಸದ ವೀಸಾದ ಮೇಲೆ ಅಮೆರಿಕಕ್ಕೆ ಪ್ರವೇಶಿಸಿ, ಅಲ್ಲಿಗೆ ತಲುಪಿದ ನಂತರ ತಮ್ಮ ದೇಶದಲ್ಲಿ ಜೀವಕ್ಕೆ ಅಪಾಯವಿದೆ ಎಂದು ಹೇಳಿ 'ಆಶ್ರಯ' ಕೋರುತ್ತಿದ್ದರು. ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ವಲಸೆ ನೀತಿಯನ್ನು ಬಿಗಿಗೊಳಿಸಲು ಸ್ಟೇಟ್ ಡಿಪಾರ್ಟ್‌ಮೆಂಟ್ ಈ ಕ್ರಮ ಕೈಗೊಂಡಿದೆ.