* ಇಟಲಿಯ 23 ವರ್ಷದ ಯುವ ಆಟಗಾರ ಹಾಗೂ ವಿಶ್ವದ ಹಾಲಿ ನಂ.1 ಪ್ಲೇಯರ್‌ ಜಾನಿಕ್ ಸಿನರ್‌, 2024ರ ಸಾಲಿನ ಯುಎಸ್‌ ಓಪನ್ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. * ಇಲ್ಲಿನ ಆರ್ಥರ್‌ ಆಷ್‌ ಕ್ರೀಡಾಂಗಣದಲ್ಲಿ ಭಾನುವಾರ (ಸೆ.8) ನಡೆದ ಫೈನಲ್‌ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಜಾನಿಕ್  ಸಿನರ್‌, ಆತಿಥೇಯ ಅಮೆರಿಕದ ಯುವ ಪ್ರತಿಭೆ ಟೇಲರ್‌ ಫ್ರಿಟ್ಸ್‌ ಅವರನ್ನು 6-3, 6-4, 7-5 ಅಂತರದ ನೇರ ಸೆಟ್‌ಗಳಿಂದ ಮಣಿಸಿ ಮೊಟ್ಟ ಮೊದಲ ಬಾರಿ ಯುಎಸ್‌ ಓಪನ್‌ ಚಾಂಪಿಯನ್‌ ಎನಿಸಿದರು.* ಈ ಗೆಲುವಿನೊಂದಿಗೆ ಯುಎಸ್‌ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದ ಇಟಲಿಯ ಮೊದಲ ಪುರುಷ ಆಟಗಾರ ಎಂಬ ದಾಖಲೆಯನ್ನು ಜಾನಿಕ್ ಸಿನರ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ  ಮೊದಲು 2015ರಲ್ಲಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ರಾಬರ್ಟಾ ವಿಂಚಿ ಅವರನ್ನು ಮಣಿಸಿ ಫ್ಲಾವಿಯಾ ಪೆನೆಟಾ ಯುಎಸ್‌ ಓಪನ್‌ ಗೆದ್ದ ಇಟಲಿಯ ಮೊದಲ ಟೆನಿಸ್‌ ತಾರೆ ಎನಿಸಿದ್ದರು.