➤ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಆಹಾರ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಆಹಾರ ಕಾರ್ಯಕ್ರಮ (World Food Programme - WFP) ಎಚ್ಚರಿಸಿದೆ. ಯುದ್ಧವು ಇದೇ ರೀತಿ ಜೂನ್ ತಿಂಗಳವರೆಗೆ ಮುಂದುವರಿದರೆ, ವಿಶ್ವದಾದ್ಯಂತ ಹೆಚ್ಚುವರಿಯಾಗಿ 4.5 ಕೋಟಿ (45 ಮಿಲಿಯನ್) ಜನರು ತೀವ್ರ ಹಸಿವಿನಿಂದ ಬಳಲಲಿದ್ದಾರೆ. ಈಗಾಗಲೇ ಜಗತ್ತಿನಾದ್ಯಂತ ಸುಮಾರು 31.9 ಕೋಟಿ ಜನರು ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ. ಸಂಘರ್ಷ ಮುಂದುವರಿದರೆ ಈ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಲಿದೆ. ಮತ್ತು ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗವಾಗಿ ನಡೆಯುವ ಹಡಗು ಸಾರಿಗೆ ವೆಚ್ಚದಲ್ಲಿ ಶೇ. 18 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.➤ ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧದ ಪ್ರಭಾವ: ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ WFP ಡೆಪ್ಯೂಟಿ ಎಕ್ಸಿಕ್ಯೂಟಿವ್ ಡೈರಕ್ಟರ್ ಕಾರ್ಲ್ ಸೌ ಅವರು ಕೆಲವು ಆತಂಕಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ:- ವ್ಯಾಪಾರ ಮಾರ್ಗಗಳ ಬಂದ್: ಇರಾನ್ ಯುದ್ಧದಿಂದಾಗಿ ಅತಿ ಪ್ರಮುಖ ವ್ಯಾಪಾರ ಮಾರ್ಗವಾದ ಹೊರ್ಮುಜ್ ಜಲಸಂಧಿ (Strait of Hormuz) ಬಂದ್ ಆಗಿದೆ. ಇದು ಜಾಗತಿಕ ತೈಲ ಮತ್ತು ಸರಕು ಸಾಗಣೆಯ ಮೇಲೆ ನೇರ ಪರಿಣಾಮ ಬೀರಿದೆ.- ಬೆಲೆ ಏರಿಕೆ: ಕಚ್ಚಾ ತೈಲ, ರಸಗೊಬ್ಬರ ಮತ್ತು ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.- ಸರಬರಾಜು ಸರಪಳಿ ವ್ಯತ್ಯಯ: ಯುದ್ಧದ ಕಾರಣದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇದು ಹಣದುಬ್ಬರಕ್ಕೆ (Inflation) ನಾಂದಿ ಹಾಡಿದೆ.➤ WFP (World Food Programme): ಇದರ ಪ್ರಧಾನ ಕಚೇರಿ ಇಟಲಿಯ ರೋಮ್‌ನಲ್ಲಿದೆ. ಹಸಿವನ್ನು ಹೋಗಲಾಡಿಸುವ ಮತ್ತು ಆಹಾರ ಭದ್ರತೆಯನ್ನು ಉತ್ತೇಜಿಸುವ ವಿಶ್ವದ ಅತಿದೊಡ್ಡ ಮಾನವೀಯ ಸಂಸ್ಥೆಯಾಗಿದೆ.