* ಭಾರತದ ರಾಮೇಶ್ವರ ದ್ವೀಪವನ್ನು ಸಂಪರ್ಕಿಸುವ ಪಂಬನ್ ಲಿಫ್ಟ್ ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ. ಅತಿ ಆಧುನಿಕ ತಂತ್ರಜ್ಞಾನದಿಂದ ನಿರ್ಮಿತ ಈ ಸೇತುವೆ ಮೂಲಕ ಮಂಡಪಂ ಮತ್ತು ಪಂಬನ್ ನಿಲ್ದಾಣಗಳ ನಡುವೆ ರೈಲು ಸಂಚಾರ ನಡೆಯಲಿದೆ.* ರಾಮೇಶ್ವರ ದ್ವೀಪ ಸಂಪರ್ಕಕ್ಕಾಗಿ 2019ರಲ್ಲಿ ಆರಂಭಿಸಿದ 2.10 ಕಿ.ಮೀ ಉದ್ದದ ಹೊಸ ಸೇತುವೆ ₹531 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಪಾಕ್ ಜಲಸಂಧಿಯಲ್ಲಿರುವ ಈ ಸೇತುವೆ ಲಂಬವಾಗಿ ತೆರೆದುಕೊಳ್ಳುವ ದೇಶದ ಮೊದಲ ಸೇತುವೆಯಾಗಿದೆ. ಈ ಮೇಲಿನ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.* ಲಿಫ್ಟ್ ಅಳವಡಿಕೆಯೇ ಸೇತುವೆಯ ವಿಶೇಷವಾಗಿದ್ದು, ಸ್ಪೇನ್ ಹಾಗೂ ಜರ್ಮನಿಯ ತಂತ್ರಜ್ಞಾನ ಬಳಸಿ ಲಂಬವಾಗಿ ತೆರೆದುಕೊಳ್ಳುವ ಸೇತುವೆಯನ್ನು ಭೂ ಭಾಗದಿಂದ 600 ಮೀಟರ್ ದೂರದಲ್ಲಿ ನಿರ್ಮಾಣ ಮಾಡಲಾಗಿದೆ.* ತಮಿಳುನಾಡಿನ ದ್ವೀಪನಗರ ಹಾಗೂ ನಾಲ್ಕು (ಚಾರ್) ಧಾಮಗಳಲ್ಲಿ ಒಂದಾಗಿರುವ ರಾಮೇಶ್ವರಂನ ಪಂಬನ್ನಲ್ಲಿ ವಿನೂತನ 'ವರ್ಟಿಕಲ್ ಸೀ ಬ್ರಿಡ್ಜ್' ಇದೇ ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.* ಈ ಸೇತುವೆಯಲ್ಲಿ ಗಂಟೆಗೆ 75 ಕಿ.ಮೀ ವೇಗದಲ್ಲಿ ರೈಲು ಸಂಚರಿಸಬಹುದು. ಸಮುದ್ರದ ಮಧ್ಯದಲ್ಲಿ 333 ಪಿಲ್ಲರ್ಗಳ ಮೇಲೆ ನಿರ್ಮಾಣವಾಗಿದ್ದು, 660 ಟನ್ ತೂಕದ ಲಿಫ್ಟ್ ಸ್ಪ್ಯಾನ್ ಮತ್ತು ರೈಲ್ವೆ ಟ್ರ್ಯಾಕ್ ಹೊಂದಿದೆ. ಇದು 5 ನಿಮಿಷ 30 ಸೆಕೆಂಡುಗಳಲ್ಲಿ ಮೇಲಕ್ಕೆ ಎತ್ತಲ್ಪಟ್ಟು, ಬ್ರಹತ್ ದೋಣಿಗಳ ಮತ್ತು ಕರಾವಳಿ ಕಾವಲು ಪಡೆ ಸಂಚಾರಕ್ಕೆ ಅವಕಾಶ ನೀಡುತ್ತದೆ.* ಸೇತುವೆಯ ಬಾಳಿಕೆ ಅವಧಿ 100 ವರ್ಷ ಎಂದು ಅಂದಾಜಿಸಲಾಗಿದ್ದು, ನಿರ್ವಹಣೆ ಮಾಡಿದರೆ ಇನ್ನೂ ಹೆಚ್ಚು ವರ್ಷ ಸುಭದ್ರವಾಗಿರಲಿದೆ ಎಂದು ಎಂಜಿನಿಯರ್ ಕೆ. ವೇಲು ಮುರುಗನ್ ತಿಳಿಸಿದರು.* ಪಂಬನ್ ಸೇತುವೆಗೆ ತುಕ್ಕು ತಡೆಯಲು ಪಾಲಿಸಿಲೋಕ್ಸೇನ್ ಬಣ್ಣ, ತುಕ್ಕುನಿರೋಧಕ ಉಕ್ಕು ಬಳಸಲಾಗಿದೆ. ಗಾಳಿಯ ವೇಗ ಪತ್ತೆ ಮಾಡಲು ಸೆನ್ಸಾರ್ ಅಳವಡಿಸಿದ್ದು, ಅಪಾಯದ ಸಂದರ್ಭ ಸ್ವಯಂಚಾಲಿತವಾಗಿ ರೈಲು ನಿಲ್ಲಲಿದೆ.* ಭಾರತ-ಶ್ರೀಲಂಕಾ ವ್ಯಾಪಾರ ಸುಧಾರಣೆಗೆ 1914ರಲ್ಲಿ ಪಾಕ್ ಜಲಸಂಧಿಯಲ್ಲಿ ರೈಲ್ವೆ ಸೇತುವೆ ನಿರ್ಮಿಸಲಾಯಿತು. 1964ರಲ್ಲಿ ಚಂಡಮಾರುತದಿಂದ ಹಾನಿಯಾದ ಸೇತುವೆಯನ್ನು ದುರಸ್ತಿಗೊಳಿಸಿ ಬ್ರಾಡ್ ಗೇಜ್ಗೆ ಪರಿವರ್ತಿಸಲಾಯಿತು. 110 ವರ್ಷ ಹಳೆಯ ಸೇತುವೆಯ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದ್ದು, ಅದು ಸಂಚಾರಕ್ಕೆ ಮುಕ್ತವಾದ ಬಳಿಕ ಹಳೆಯ ಸೇತುವೆ ತೆರವುಗೊಳ್ಳಲಿದೆ.