Job Description: ➤ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ಸ್ನೇಹಿತರೇ, ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಚೀನ ಇತಿಹಾಸ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಎತ್ತಿಹಿಡಿಯುವ ಅತ್ಯಂತ ಪ್ರಮುಖ ಪುರಾತತ್ವ ಆವಿಷ್ಕಾರವೊಂದು ನಡೆದಿದೆ. ಥೈಲ್ಯಾಂಡ್‌ನ ಪೆಚಬುರಿ ಪ್ರಾಂತ್ಯದಲ್ಲಿ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಎರಡು ಭಾರತೀಯ ಚಿನ್ನದ ಉಂಗುರಗಳು ಪತ್ತೆಯಾಗಿವೆ.➤ ಥೈಲ್ಯಾಂಡ್‌ನ ಫೈನ್ ಆರ್ಟ್ಸ್ ಇಲಾಖೆಯ ಪ್ರಕಾರ, ಬ್ಯಾಂಕಾಕ್‌ನಿಂದ ನೈಋತ್ಯಕ್ಕೆ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ 'ಡಾನ್ ಯಾಯ್ ಥಾಂಗ್' (Don Yai Thong) ಎಂಬ ಪುರಾತತ್ವ ನಿವೇಶನದಲ್ಲಿ ಈ ಸಂಶೋಧನೆ ನಡೆದಿದೆ. ಭತ್ತದ ಗದ್ದೆಯೊಂದರಲ್ಲಿ ಪ್ರಾಚೀನ ಕಂಚಿನ ಡ್ರಮ್‌ಗಳ ತುಣುಕುಗಳು ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಉತ್ಖನನ ಆರಂಭಿಸಲಾಗಿತ್ತು. ಇಲ್ಲಿ ಸಿಕ್ಕ ಹೂಳಲಾದ ಅಸ್ಥಿಪಂಜರಗಳ ಜೊತೆಗೆ ಈ ಅಪರೂಪದ ಚಿನ್ನದ ಉಂಗುರಗಳು ಸಿಕ್ಕಿವೆ.➤ ಬ್ರಾಹ್ಮಿ ಲಿಪಿಯ ರಹಸ್ಯ ಮತ್ತು 'ಪುಷ್ಯ' ನಕ್ಷತ್ರದ ಲಿಂಕ್: ಪತ್ತೆಯಾದ ಎರಡು ಉಂಗುರಗಳಲ್ಲಿ ಒಂದು ಸರಳವಾಗಿದ್ದರೆ, ಮತ್ತೊಂದು ಉಂಗುರದ ಮೇಲೆ ಪ್ರಾಚೀನ ಭಾರತೀಯ ಬರವಣಿಗೆಯಾದ ಬ್ರಾಹ್ಮಿ ಲಿಪಿಯನ್ನು (Brahmi Script) ಕೆತ್ತಲಾಗಿದೆ. ಏನಿದೆ ಆ ಬರಹದಲ್ಲಿ?: ತಜ್ಞರ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಆ ಉಂಗುರದ ಮೇಲೆ "ಪುಸರಖಿತಸ" (pusarakhitasa) ಎಂದು ಬರೆಯಲಾಗಿದೆ. ಅರ್ಥವೇನು?: ಇದರ ಅರ್ಥ "ಪುಷ್ಯ ನಕ್ಷತ್ರದಿಂದ ರಕ್ಷಿಸಲ್ಪಟ್ಟವನು" (The one protected by Pushya) ಎಂದಾಗುತ್ತದೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರ ಮತ್ತು ಖಗೋಳವಿಜ್ಞಾನದಲ್ಲಿ 'ಪುಷ್ಯ' ನಕ್ಷತ್ರವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಆವಿಷ್ಕಾರವು ಭಾರತೀಯ ನಕ್ಷತ್ರ ವ್ಯವಸ್ಥೆ ಮತ್ತು ನಂಬಿಕೆಗಳು ಅಂದಿನ ಕಾಲದಲ್ಲೇ ಆಗ್ನೇಯ ಏಷ್ಯಾಕ್ಕೆ ಹರಡಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ. ➤ ಉಂಗುರದ ಮಾಲೀಕರು ಯಾರಾಗಿದ್ದರು?ಇತಿಹಾಸಕಾರರ ಪ್ರಕಾರ, ಈ ಉಂಗುರಗಳು ಭಾರತದ ಪ್ರಾಚೀನ ವರ್ಣ ವ್ಯವಸ್ಥೆಯಲ್ಲಿದ್ದ 'ವೈಶ್ಯ' (Vaishyas) ಅಂದರೆ ವ್ಯಾಪಾರಿ ವರ್ಗಕ್ಕೆ ಸೇರಿದ ವ್ಯಕ್ತಿಯದ್ದಾಗಿರಬಹುದು. ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾ ನಡುವೆ ಬಲವಾದ ಕಡಲ ವ್ಯಾಪಾರ ಸಂಪರ್ಕವಿತ್ತು (Maritime Trade Links). ಭಾರತದ ವರ್ತಕರು ವ್ಯಾಪಾರಕ್ಕಾಗಿ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಈ ಉಂಗುರಗಳು ಅಲ್ಲಿಗೆ ತಲುಪರಬಹುದು ಎಂದು ಅಂದಾಜಿಸಲಾಗಿದೆ.➤ ಮುಖ್ಯ ಮಾಹಿತಿ: ಈ ನಿವೇಶನವನ್ನು ಥೈಲ್ಯಾಂಡ್‌ನ ಕಬ್ಬಿಣದ ಯುಗದ (Iron Age) ಕೊನೆಯ ಹಂತಕ್ಕೆ (ಸುಮಾರು 1,500 ರಿಂದ 2,500 ವರ್ಷಗಳ ಹಿಂದೆ) ಸೇರಿದ್ದೆಂದು ಗುರುತಿಸಲಾಗಿದೆ. ಪ್ರಸ್ತುತ ಈ ಉಂಗುರಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ರಾಚಬುರಿ ಪ್ರಾಂತ್ಯದ 'ಪ್ರಾ ನಾಖೋನ್ ಖಿರಿ' ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಲಾಗಿದೆ.